ಕೀರ್ತನೆ - 154     
 
ಸಾಕು ಸಾಕಿನ್ನು ಸಂಸಾರ ಸುಖವು ಶ್ರೀಕಾಂತ ನೀನೊಲಿದು ಕರುಣಿಸೈ ಹರಿಯೆ ಉದಿಸಿದುವು ಪಂಚಭೂತಗಳಿಂದ ಓಷಧಿಗಳು ಉದಿಸಿದುದು ಓಷಧಿಗಳಿ೦ದನ್ನವು ಉದಿಸಿದುವು ಅನ್ನದಿಂ ಶುಕ್ಲ ಶೋಣಿತವೆರಡು ದಿಸಿದುವು ಸ್ತೀ ಪುರುಷರಲ್ಲಿ ಹರಿಯೆ ಸತಿಪುರುಷರೊಂದಾಗಿ ರತಿಕ್ರೀಡೆಗಳ ಮಾಡೆ ಪತನವಾದಿಂದ್ರಿಯವು ಹೊಲೆರುಧಿರವು ಸತಿಯ ಉದರದೊಳೆರಡು ಏಕತ್ರ ಸಂಧಿಸುತ ಪುತಪುತನೆ ಮಾಸ ಪರಿಯಂತ ಹರಿಯೆ ಮಾಸವೆರಡರಲಿ ಶಿರ ಮಾಸ ಮೂರರಲಿ ಅಂಗ ಮಾಸ ನಾಲ್ಕರಲಿ ಚರ್ಮದ ಹೊದಿಕೆ ಮಾಸ ಐದಾರರಲಿ ನಖ ರೋಮ ನವರಂಧ್ರ ಮಾಸ ಏಳರಲಿ ಧಾತು ಹಸಿವು ತೃಷೆಯು ತಿಂಗಳೆಂಟರಲಿ ಪೂರ್ವಾನುಭವ ಕರ್ಮಗಳ ಗುಂಗಿನಲಿ ನಾನಿಂತು ಭವಭವದೊಳು ಅ೦ಗನೆಯರುದರದಲಿ ಮತ್ತೆಮತ್ತೆ ಬಂದು ಭಂಗಪಡೆನೆಂದು ಧ್ಯಾನಿಸುತ ದಿನಗಳೆದೆ ಇನಿತು ಗರ್ಭದೊಳು ನವ ಮಾಸ ಪರಿಯಂತರದಿ ತನು ಸಿಲುಕಿ ನರಕದಲಿ ಆಯಾಸಗೊಂಡು ಘನ ಮರುತ ಯೋಗದಿಂ ನರಳುತಿಲ್ಲಿಗೆ ಬಂದು ಜನಿಸುವಲ್ಲಿ ಮೃತಭಾವದಿಂದ ನೊಂದೆನೈ ಹರಿಯೆ ಧರೆಯ ಮೇಲುದಿಸಿ ಬಹು ವಿಷ್ಣು ಮಾಯಕೆ ಸಿಲುಕಿ ಪರವಶದೊಳಿರಲು ನೀರಡಿಕೆಯಾಗಿ ಹೊರಳಿ ಗೋಳಿಡುತ ಕಣ್ಣೆರೆದು ಹರಿಯನು ಮರೆವ ದುರಿತ ರೂಪದ ತನುವ ಧರಿಸಲಾರೆ ಶಿಶುತನದೊಳಗೆ ಸೊಳ್ಳೆ ನೊಣ ಮುಸುಕಿ ಅತ್ತಾಗ ಹಸಿದನಿವನೆಂದು ಹಾಲನೆ ಎರೆವರು ಹಸಿವು ತೃಷೆಯಿಂದಳಲು ಹಾಡಿ ತೂಗುವರಾಗ ಪಶು ತೆರದಿ ಶಿಶುತನದೊಳಿರಲಾರೆ ಹರಿಯೆ ನಡೆಯಲರಿಯದ ದುಃಖ ಮನಸಿನಲಿ ಬಯಸಿದುದ ನುಡಿಯಲರಿಯದ ದುಃಖ ವಿಷಯದಿಂದ ಅಡಿಯಿಡುತ ಮೆಲ್ಲನೇಳುತ ಬೀಳುತಲಿ ತೊದಲು ನುಡಿವ ಬಾಲ್ಯದೊಳಿರಲಾರೆ ಹರಿಯೆ ಬಾಲ್ಯದೊಳು ಕೆಲವು ದಿನ ಬರಿದೆ ಹೋಯಿತು ಹೊತ್ತು ಗೋಳಿಡುತ ವಿದ್ಯೆ ಕರ್ಮಗಳ ಕಲಿತು ಮೇಲೆ ಯೌವನದ ಉಬ್ಬಿನೊಳು ಮದುವೆಯಾಗಿ ಬಾಲೆಯರ ಬಯಸಿ ಮರುಳಾದೆ ಹರಿಯೆ ಜ್ವರದ ಮೇಲತಿಸಾರ ಬಂದವೊಲು ಯೌವನದಿ ತರುಣಿಯೊಡನಾಟ ಕೂಟದ ವಿಷಯದಿ ತರುಣಿ ಸುತರ್ಗನ್ನ ವಸ್ತಾಭರಣವೆನುತ ಪರರ ಸೇವೆಯಲಿ ಘಾಡ ನೊಂದೆ ಹರಿಯೆ ನೆತ್ತರು ತೊಗಲು ಮೂಳೆ ಮಜ್ಜೆ ಮಾಂಸದ ಹುತ್ತು ಜೊತೆಗಿಂದ್ರಿಯಗಳ ರೋಗ ರುಜಿನದಲಿ ಮತ್ತೆ ಕಾಲನ ಬಾಯ ತುತ್ತಾಗುವ ಕರ್ಮದ ಕತ್ತಲೆಯೊಳೀ ದೇಹ ಕರಡಾಯಿತು ದಿಟ್ಟತನದಲಿ ಗಳಿಸಿ ತರುವಾಗ ಸತಿಸುತರು ಕಟ್ಟಿ ಕಾದಿಹರು, ಮುಪ್ಪಡಿಸಿದಾಗ ತಟ್ಟನೆ ಬಲು ಕೆಟ್ಟ ನುಡಿಗಳಲಿ ಬೈಯುತ್ತ ಕಟ್ಟಕಡೆಗೆ ಕಣ್ಣೆತ್ತಿ ನೋಡರೈ ಹರಿಯೆ ಕಟ್ಟುನಿಟ್ಟನ ಭಾರಿ ಮೂಗುಬ್ಬಸದಿ ನೊಂದು ಕಟ್ಟಳೆಯ ದಿನ ತು೦ಬಿ ಮೃತವಾಗಲು ಕುಟ್ಟಿಕೊ೦ಡಳಲುತ್ತ ಹೋಯೆಂದು ಬಂಧುಗಳು ಮುಟ್ಟರು ಹೆಣನೆಂದು ದೂರವಿಹರು ಸತ್ತ ಹೆಣಕಳಲೇಕೆ ಎಂದು ನೆಂಟರು ಸುಯ್ದು ಹೊತ್ತು ಹೋಯಿತೆನ್ನುತ ಕಸಕೆ ಕಡೆಯಾಗಿ ಹೊತ್ತು ಕೊಂಡಗ್ನಿಯಲಿ ತನುವನಿದ ಬಿಸಡುವರು ಮತ್ತೆ ಬುವಿಯಲಿ ಜನಿಸಲಾರೆ ಹರಿಯೆ ಇನ್ನು ಈ ಪರಿಪರಿಯ ಯೋನಿ ಮುಖದಲಿ ಬಂದು ಬನ್ನವನು ಪಡಲಾರೆ ಭವಭವದೊಳು ಜನನ ಮರಣಾದಿ ಸರ್ವ ಕ್ಷೇಶಗಳ ಪರಿಹರಿಸಿ ಸನ್ನತಿಯೊಳಿರಿಸೆನ್ನ ಆದಿಕೇಶವರಾಯ