ಮೊರೆಹೊಕ್ಕೆ ಹರಿ ನಿಮ್ಮ ಚರಣಕಮಲವ ನಾನು
ಮರೆಯದೆ ಸಲಹೆನ್ನ ವರದಾ
ಕರಿ ದ್ರುವ ಪ್ರಹ್ಲಾದ ವಿಭೀಷಣರ ರಕ್ಷಿಸಿದೆ
ಪರಂದೇವಿ ವಲ್ಲಭನೆ ವರದಾ
ಎಂಬತ್ತು ನಾಲ್ಕು ಲಕ್ಷ ಜೀವರಾಶಿ ಯೋನಿಯೊಳು
ಹಂಬಲಿಸಿ ನಾ ಬಂದೆ ವರದಾ
ಅ೦ಬುಜೋದ್ಭವನ ಬರೆಹವ ಮೀರಲಾರದೆ ನರ
ಬೊಂಬೆ ಗರ್ಭದೊಳಿದ್ದೆ ವರದಾ
ತುಂಬಿದ್ದ ಕೀವು ಮಲಮೂತ್ರ ರಕ್ತದಿ೦ ಹೊರಳುವ
ಸ೦ಭ್ರಮದೊಳಿದ್ದೆ ನಾ ವರದಾ
ಒಂಬತ್ತು ಮಾಸವು ಕಳೆದು ಗುಂಡಿಯೊಳಿಳಿದು ಈ
ಕುಂಭಿನಿಗೆ ನಾ ಬಂದೆ ವರದಾ
ನಸುನುಡಿಯನು ಕಲಿತು ನಸುನಗೆಗಳ ನಕ್ಕು ಈ
ಕುಶಲದಾಟವ ಕಲಿತೆ ವರದಾ
ಎಸೆವ ಯೌವನ ಬಂದು ಶಶಿಮುಖಿಯರೊಳು ಕಾಮ
ತೃಷೆಗೆ ನಾನೊಳಗಾದೆ ವರದಾ
ನುಸುಳಿಸುವ ಚಾಂಡಾಲ ಗುಣವನೆಣಿಸದೆ ಕಾಮ
ವಶನಾಗಿ ನಾನಿದ್ದೆ ವರದಾ
ಉಸುರಲೆನ್ನಳವಲ್ಲ ಬೆಸನಿತ್ತು ಸಲಹೆನ್ನ
ಬಿಸರುಹಾಕ್ಷನೆ ಕಂಚಿ ವರದಾ
ಗುರು ಹಿರಿಯರ ಕಂಡು ಸರಿಸಮಾನದಿ ನಾನು
ಬೆರೆದುಕೊಂಡಿದ್ದೆನೋ ವರದಾ
ನರರ ಕೊಂಡಾಡಿ ನಾಲಗೆಯೊಣಗಿ ಅತಿಯಾಗಿ
ನರನರಳಿ ಬೆಂಡಾದೆ ವರದಾ
ಕಾಸಿಗಾಸೆಯ ಪಟ್ಟು ಸಹಸ್ತ ಲಕ್ಷದ ಪುಸಿಯ
ಬೇಸರಿಸದೆ ಬೊಗಳಿದೆ ವರದಾ
ವಿಶೇಷ ನಿಮ್ಮಂಫ್ರಿಯ ನಂಬಲಾರದೆ ಕೆಟ್ಟ
ದೋಷಕನು ನಾನಾದೆ ವರದಾ
ಪಂಚೇ೦ದ್ರಿಯಗಳೊಳಗೆ ಸಂಚರಿಸುವೀ ಮನವು
ಕೊಂಚ ಗುಣಕೆಳೆಯುತಿದೆ ವರದಾ
ಪಂಚತ್ರಿಂಶತ್ಕೋಟಿ ಭೂಮಂಡಲದೊಳೆನ್ನಂಥ
ಪಂಚಪಾತಕನುಂಟೆ ವರದಾ
ಮುಂಚೆ ಶ್ರೀ ಹರಿಯೆ ನಿಮ್ಮ ವರಧ್ಯಾನ ಮಾಡುವರ
ಪಂಚೆಯಲ್ಲಿರಿಸನ್ನ ವರದಾ
ಪಂಚಬಾಣನ ಪಡೆದ ನೆಲೆಯಾದಿ ಕೇಶವ ಈ ಪ್ರ
ಪಂಚವನು ಬಿಡಿಸೆನ್ನ ವರದಾ
Music
Courtesy:
ಸ್ಥಲ -
ವಿಷಯ -
ಜ್ಞಾನ ಭಕ್ತಿ ವೈರಾಗ್ಯ