ಕೈಯ ತೋರಿದ ಬಗೆಯ, ಅಮ್ಮಮ್ಮ
ಯಾದವಗಿರಿ ಕಲ್ಕಾಣಿ ನೀನು
ಸಕಲ ಜನರು ಕಾಣುತಿರಲು
ವಿಕೃತಿ ವತ್ಸರ ಚೈತ್ರ ದ್ವಿತೀಯೇಕಾದಶಿಯೊಳು
ಪ್ರಕಟಿತಾ ಶುಕ್ರವಾರದೊಳು ತನ್ನ
ಭಕುತರಿಗುತ್ಸಾಹ ಸಂಧ್ಯಕಾಲದೊಳು
ಕಡಗ ಕಂಕಣ ಗೀರುಗಂಧ ಮಿಗೆ
ಕಡು ಚೆಲುವಿನ ಬಣ್ಣ ಕುಪ್ಪುಸದಿಂದ
ನಡು ಬೆರಳುಂಗುರದಿಂದ ಕೈಯ
ಬೆಡಗ ನೋಡಿದ ಜನರಿಗೆ ಪುಟ್ಟಿತಾನಂದ
ಜನರೆಲ್ಲ ಯದುಶೈಲೋತ್ಸವವ ಕೇಳಿ
ಘನ ಕಾಲದೇಶದಜಿತ ಭಯವ
ನಿಮಗೆ ಬಿನ್ನೈಪೆನು ನಯವ ಕೊಟ್ಟ
ಮನೋಹರುಷದಿ ನಮಗಿತ್ತ ವೈಭವವ
ಚೆಲುವರಾಯನ ರಥೋತ್ಸವದೀ ತೀರ್ಥ
ಕೊಲಿದು ಗಂಗಾದೇವಿ ಬರುವ ಸಂಭಮವ
ನೆಲೆಯ ಸರ್ವರಿಗನುಭವವ ಕೋಟಿ
ಮನೋಹರುಷವನ್ನು ನಮಗಿತ್ತ ವೈಭವವ
ನಿನ್ನ ಮೋಹದ ಕಂದ ನಾನೊ ಕೇಳೆ
ನಿನ್ನೊಮ್ಮೆ ದಿವ್ಯ ಹಸ್ತಂಜವನೀವ
ಚೆನ್ನಿಗ ವರದ ವೆಂಕಟಾದಿಕೇಶವನು
ತನ್ನ ನಂಬಿದ ಭಕ್ತರಾಶ್ರಿತ ಕಾಮಧೇನು