ಏನೆಂದು ಕೊಂಡಾಡಿ ಸ್ತುತಿಸಲೋ ದೇವ
ನಾನೇನು ಬಲ್ಲೆ ನಿನ್ನ ಮಹಿಮೆಗಳ ಮಾಧವ
ಹರಿಮುಕು೦ದನು ನೀನು ನರಜನ್ಮ ಹುಳು ನಾನು
ಪರಮಾತ್ಮನು ನೀನು ಪಾಮರನು ನಾನು
ಗರುಡ ಗಮನನು ನೀನು ಮರುಳು ಪಾಪಿಯು ನಾನು
ಪರಂಜ್ಯೋತಿಯು ನೀನು ದುರುಳ ತಿರುಕನು ನಾನು
ವಾರಿಧಿಶಯನನಾದ ಕಾರುಣ್ಯನಿಧಿ ನೀನು
ಘೋರದಿಂದಿಹ ಕಾಮಿಕ್ರೋಧಿ ನಾನು
ಈರೇಳು ಭುವನದೊಳು ಇರುವ ಮೂರುತಿ ನೀನು
ದೂರಿ ನಿನ್ನನು ಬೈವ ದುಷ್ಟ ನಾನು
ಅಣುರೇಣು ತೃಣಗಳಲಿ ಪರಿಪೂರ್ಣನು ನೀನು
ಕ್ಷಣಕ್ಷಣಕೆ ಅವಗುಣದ ಕುಕರ್ಮಿ ನಾನು
ವಾಣಿಯರಸನ ಪೆತ್ತ ವೈಕುಂಠಪತಿ ನೀನು
ಕ್ಷಣಭ೦ಗುರ ತನುವಿನ ಗೊಂಬೆ ನಾನು
ಕಂಬದಲಿ ಬಂದ ಆನಂದ ಮೂರುತಿ ನೀನು
ನಂಬಿಕೆಯಿಲ್ಲದ ಪ್ರಪಂಚಕನು ನಾನು
ಅ೦ಬರೀಷಗೆ ಒಲಿದ ಅಕ್ರೂರಸಖ ನೀನು
ಡಂಬ ಕರ್ಮಿಯು ನಾನು ನಿರ್ಜಿತನು ನೀನು
ತಿರುಪತಿಯ ವಾಸ ಶ್ರೀವೆಂಕಟೇಶನೆ ನಿನ್ನ
ಚರಣಸೇವಕರ ಸೇವಕನು ನಾನು
ಬಿರುದುಳ್ಳವನು ನೀನು ಮೊರೆಹೊಕ್ಕವನು ನಾನು
ಸಿರಿ ಕಾಗಿನೆಲೆಯಾದಿಕೇಶವನು ನೀನು