ಕೀರ್ತನೆ - 83     
 
ಆವ ಸಿರಿಯಲಿ ನೀನು ಎನ್ನ ಮರೆತೆ ದೇವ ಜಾನಕೀರಮಣ ಪೇಳು ರಘುಪತಿಯ ಸುರರ ಸೆರೆಯನು ಬಿಡಿಸಿ ಬಂದೆನೆಂಬಾ ಸಿರಿಯೆ ಕರಿ ಮೊರೆಯ ಲಾಲಿಸಿದನೆಂಬ ಸಿರಿಯೆ ಶರಧಿಗೆ ಸೇತುವೆಗಟ್ಟಿದೆನೆನ್ನುವಾ ಸಿರಿಯೆ ಸ್ಥಿರವಾಗಿ ಹೇಳೆನಗೆ ಹೇಳು ರಘುಪತಿಯೆ ಕಡಲೊಳಗೆ ಮನೆಮಾಡಿ ಮಲಗಿದೆನೆಂಬಾ ಸಿರಿಯೆ ಮೃಢ ನಿನ್ನ ಸಖನಾದನೆಂಬ ಸಿರಿಯೆ ಬಿಡದೆ ದ್ರೌಪದಿ ಮಾನ ಕಾಯ್ದೆನೆಂಬಾ ಸಿರಿಯೆ ದೃಢವಾಗಿ ಹೇಳೆನಗೆ ದೇವಕೀ ಸುತನೆ ಭೂಮಿಯನು ಮೂರಡಿಯ ಮಾಡಿದೆನೆಂಬ ಸಿರಿಯೆ ಕಾಮ ನಿನ್ನ ಸುತನಾದನೆಂಬ ಸಿರಿಯೆ ಆ ಮಹಾಲಕುಮಿ ನಿನ್ನ ಸತಿಯಾದಳೆಂಬ ಸಿರಿಯೆ ಪ್ರೇಮದಲಿ ಹೇಳೆನಗೆ ಸ್ವಾಮಿ ಅಚ್ಯುತನೆ ಮನುಜರೆಲ್ಲರು ನಿನ್ನ ಸ್ತುತಿಸುವರೆಂಬ ಸಿರಿಯೆ ಹನುಮ ನಿನ್ನ ಬಂಟನಾದನೆಂಬ ಸಿರಿಯೆ ಬಿನುಗು ದೈವಗಳು ನಿನಗಣೆಯಿಲ್ಲವೆಂಬ ಸಿರಿಯೆ ಅನುಮಾನ ಮಾಡದೆ ಪೇಳೊ ನರಹರಿಯೆ ಇಂತು ಸಿರಿಯಲಿ ನೀನು ಎನ್ನ ಮರೆತರೆ ಸ್ವಾಮಿ ಪಂಥವೇ ನಿನಗಿದು ಆವ ನಡತೆ ಕಂತುಪಿತ ಕಾಗಿನೆಲೆಯಾದಿಕೇಶವ ರಂಗ ಚಿಂತೆಯನು ಬಿಡಿಸಿ ಸಂತೋಷವನು ಪಡಿಸೊ