ಆರೂ ಸಮಯಕ್ಕೊದಗಲಿಲ್ಲ
ಮೋರೆ ನೋಡುತ ಸುಮನಿಹರೆಲ್ಲ
ಮಗಳು ಮಹಲಕುಮಿ ಮೊಮ್ಮಗನು ಸರಸಿಜಭವನು
ಖಗರಾಜವಾಹನನು ತನ್ನಳಿಯನು
ಅಗಜನಂದು ತನ್ನೊಡಲೊಳಿಂಬಿಟ್ಟು ಮೂ
ರ್ಬೊಗಸೆ ಮಾಡಿದ ಮುನಿಯ ಬಿಡಿಸಲಿಲ್ಲ
ಶ್ರೀದೇವಿ ಭೂದೇವಿ ಮಾತೆಯರು ತಾವಿರಲು
ಯಾದವರಾಯ ಮೋಹದ ತಂದೆಯು
ವೇದಮುಖದಣ್ಣನಿರೆ ಉರಿ ನಯನದಿಂದ ಸ್ಮರ
ಬೂದಿಯಾಗುವಾಗ ಬಿಡಿಸಲಿಲ್ಲವೇಕೆ
ಹಿತನು ಸಾಗರನು ಹಿತದಾಕೆ ಶ್ರೀದೇವಿ
ಅತಿ ಬೀಗನಾದವ ನಾರಾಯಣ
ಜತೆ ಅಳಿಯರು ಬೊಮ್ಮ ಮನ್ಮಥಹರಿರಲಾಗಿ
ಕ್ಷಿತಿಯೊಳಗೆ ಶಶಿ ಕ್ಷೀಣವಾಗುವ ಸಮಯದಿ
ತೆತ್ತೀಸ ಕೋಟಿ ದೇವರ್ಕಳು ತಾವಿರಲು
ಒತ್ತಿನಲಿ ಇಂದ್ರ ಉಪೇಂದ್ರರಿರಲು
ಮತ್ತೆ ಪಾರ್ವತಿ ಪುತ್ರ ವೀರೇಶ ದಕ್ಷನ
ನೆತ್ತಿ ಹರಿಗಡಿವಾಗ ನೋಡುತಿಹರೆಲ್ಲ
ಇಂಧಿಂಥ ದೊಡ್ಡವರು ಈ ಪಾಡು ಪಡಲಾಗಿ
ಭ್ರಾಂತ ಮನುಜರಿಗೆ ಪೇಳಲಿನ್ನೆಷ್ಟು
ಕಂತುಪಿತ ಕಾಗಿನೆಲೆಯಾದಿಕೇಶವನ
ಸಂತೋಷದಿಂ ನೆನೆದು ಸುಖಿಯಾಗೊ ಮನುಜ
Music
Courtesy:
ಸ್ಥಲ -
ವಿಷಯ -
ಜ್ಞಾನ ಭಕ್ತಿ ವೈರಾಗ್ಯ