ಅಣು ಮಹತ್ತಾದ ದೇವ
ಆಣುವಿಂಗೆ ಅಣುವು ಮಹತಿಂಗೆ ಮಹಿಮನು ಅಖಿಳ
ಗುಣಭರಿತ ಪರಮ ಪಾವನ ಚರಿತ ಎನ್ನ ನಿರ-
ಯಣ ಸಮಯದಲ್ಲಿ ಶ್ರೀಹರಿ ಹರಿಯೆ ಎಂದೆಂಬ
ನೆನಹನೊಲಿದಿತ್ತು ಸಲಹಯ್ಯ
ನೋಡಿ ನಡೆಯದೆ ಹಿಂದನೇಕ ಜನ್ಮಗಳಲ್ಲಿ
ಮಾಡಿರುವ ಪಾತಕವು ವ್ಯಾಧಿರೂಪಗಳಿಂದ
ಪೀಡಿಸುತ ತನುವ ತೊತ್ತಳ ತುಳಿದು ನೆಲಕಿಕ್ಕಿ
ತೀಡಿ ಬಸವಳಿದ ಬಳಿಕ
ನಾಡಿಗಳು ಸ್ವಸ್ಥಾನದಾಸ್ಥಾನ ಛೇದಿಸಲು
ಓಡಿ ಕಂಠೋಪದಲ್ಲಿ ಪ್ರಾಣ ನಿಲ್ಲದಲೆ ಒ-
ದ್ದಾಡುತಿಹ ಸಮಯದಲ್ಲಿ ನಾಲಗೆ ಹರಿ ನಾಮವ
ಪಾಡಿ ಪೊಗಳುವುದ ಕರುಣಿಸಯ್ಯ
ಕಂದ ಬಾರೆಂತೆಂದು ಶೋಕಿಪ ಜನನಿ ಜನಕ
ನಿಂದಳುತ ಜೇಷ್ಠರು ಕನಿಷ್ಠ ಭ್ರಾತೃಪುತ್ರ
ಬಂಧು ಮಿತ್ರರು ಬಹು ಪ್ರಳಾಪಮಂ ಗೈವ ಸತಿ
ಅಂದವಾಗಿಹ ಮಂದಿರ
ಹೊಂದಿಪ್ಪ ಸಂಪತ್ತು ನೋಡಿ ಹಂಬಲಿಸುತಲಿ
ವೃಂದಾವನ ಪ್ರಿಯನೆ ನಿನ್ನ ಮರೆತಿದ್ದೆ ಗೋ-
ವಿಂದ ವೈಕುಂಠ ವಿಭುವೇ ಎಂದು ತಾರಿಸಿ ಮು-
ಕುಂದ ಮುಕುತಿಯನೊದಗಿಸಯ್ಯ
ಫಾತೀತಿಯನು ಹಿಡಿದು ಹೆಡಗಟ್ಟಿ ಪಂಚ ಮಹಾ
ಪಾತಕನ ತೊಗಲ ಸುಲಿದೆದೆಯ ಸೀಳೆಂಬ ಯಮ
ದೂತರುದ್ಧತ ಕಣ್ಗಳನು ಕಂಡು ಮನದಲಿ
ಭೀತಿಯಿಂ ನಡುನಡುಗಿ ಬಳಲಿ
ಚೇತನವು ಕುಂದಿ ನಾಲಗೆ ಬೀಳ ಸಮಯದಲಿ
ಯಾತರಾಸೆಯು ಬಾರದಂತಾದಿಕೇಶವ ಅ-
ನಾಥ ಬಂಧುವೆ ಅಚ್ಯುತ ಮುರಾರಿ ಹರಿಯೆಂಬ
ಮಾತನಾಡಿಸಿ ಮುಕುತಿಯೊದಗಿಸಯ್ಯ
Music
Courtesy:
ಸ್ಥಲ -
ವಿಷಯ -
ಜ್ಞಾನ ಭಕ್ತಿ ವೈರಾಗ್ಯ