ಆಡಿಗೆಯನು ಮಾಡಬೇಕಣ್ಣ - ನಾನೀಗ ಜ್ಞಾನ
ದಡಿಗೆಯನು ಮಾಡಬೇಕು
ಆಡಿಗೆಯನ್ನು ಮಾಡಬೇಕು
ಮಡಿಸಬೇಕು ಮದಗಳನ್ನು
ಒಡೆಯನಾಜ್ಞೆಯಿಂದ ಒಳ್ಳೆ
ಸಡಗರದಲಿ ಮನೆಯ ಸಾರಿಸಿ
ತನ್ನ ಗುರುವ ನೆನೆಯ ಬೇಕಣ್ಣ
ತನುಭಾವವೆಂಬ ಭಿನ್ನ ಕಲ್ಮಶವಳಿಯ ಬೇಕಣ್ಣ
ಒನಕೆಯಿಂದ ಕುಟ್ಟಿಕೇರಿ ತನಗೆ ತಾನೆ ಆದ ಕೆಚ್ಚ
ನನುವರಿತು ಇಕ್ಕಬೇಕು ಆರಿವರ್ಗವೆಂಬ ತುಂಟರಳಿಸಿ
ತತ್ತ್ವಭಾಂಡವ ತೊಳೆಯ ಬೇಕಣ್ಣ - ಸತ್ಯಾತ್ಮನಾಗಿ
ಆರ್ತಿ ಅಕ್ಕಿಯ ಮಥಿಸಬೇಕಣ್ಣ
ಕತ್ತರಿ ಮನವೆಂಬ ಹೊಟ್ಟನು ಎತ್ತಿ ಒಲೆಗೆ ಹಾಕಿ ಇನ್ನು
ಮುತ್ತಿಕೊಂಡಿಹ ಮಮತೆಯನ್ನು ಎತ್ತಿ ಎಸರ ಹಿಂಗಿಸುತಲಿ
ಜನನ ಸೊಂಡಿಗೆ ಹುರಿಯಬೇಕಣ್ಣ - ನಿಜವಾಗಿ ನಿಂತು
ತನುವು ತುಪ್ಪವ ಕಾಸಬೇಕಣ್ಣ
ಕನಕಗಿರಿ ಕಾಗಿನೆಲೆಯಾದಿಕೇಶವನ ದಾಸ
ಕನಕನ ಕಟ್ಟಳೆಯೊಳು ನಿಂತು ಸುಖದ ಪಾಕವ ಚಂದದಿ ಸವಿದುಣ್ಣಲಿಕ್ಕೆ