ಕೀರ್ತನೆ - 64     
 
ಪೂರ್ವ ಜನ್ಮದಲಿ ನಾ ಮಾಡಿದ ಕರ್ಮದಿಂ ಉರ್ವಿಯೊಳು ಜನಿಸಿದನೊ ಕೃಷ್ಣ ಕಾರುಣ್ಯನಿಧಿ ಎನ್ನ ಕಾಯಬೇಕಯ್ಯ ಹರಿ ವಾರಿಜನಾಭನೆ ಮುದ್ದುಕೃಷ್ಣ ಪುಟ್ಟದಂದಿನಾರಭ್ಯ ಸುಖವೆಂಬುವುದನರಿಯೆ ಕಷ್ಟ ಪಟ್ಟಿನು ಕೇಳೋ ಕೃಷ್ಣ ತೊಟ್ಟಿಲ ಶಿಶು ತಾಯ್ದೆ ಬಾಯ್ಬಿಟ್ಟ ತೆರದಿ ಕಂ- ಗೆಟ್ಟು ಶೋಕಿಪೆನೋ ಕೃಷ್ಣ ಮುಟ್ಟಲಮ್ಮರು ಎನ್ನ ಬಂಧುಗಳು ಕಂಡರೆ ಅಟ್ಟಿ ಬಡಿವುತಲಿಹರೊ ಕೃಷ್ಣ ದಟ್ಟ ದಾರಿದ್ರವನು ಪರಿಹರಿಸದಿದ್ದರೆ ಮುಟ್ಟುವುದು ದೂರು ನಿನಗೆ ಕೃಷ್ಣ ಕಾಶಿಯಾ ವಾಸವನು ಬಯಸಿ ಬಹು ದಿನದಿಂದ ಘಾಸಿ ಪಟ್ಟಿನು ನಾನು ಕೃಷ್ಣ ಈ ಶರೀರವನಾಂತು ಹೀನಾಯಗೊಂಡೆನು ನೀ ಸಲಹಬೇಕಯ್ಯ ಕೃಷ್ಣ ಹೇಸಿಗೆಯ ಸಂಸಾರದಿ ನೀನಿಂತು ಮಾಯಾ ಪಾಠದೊಳು ಬಿಗಿವರೇ ಕೃಷ್ಣ ಫಾಸಿ ಮಾಡದೆ ಎನ್ನ ಪಾಪವನು ಪರಿಹರಿಸೊ ಸಾಸಿರನಾಮದ ಮುದ್ದುಕೃಷ್ಣ ಲೋಕದೊಳು ಎನ್ನಂಥ ಪಾಪಿಗಳು ಉಂಟೆಂದು ನೀ ಕೇಳಿ ಬಲ್ಲೆಯಾ ಕೃಷ್ಣ ಸಾಕೇಳು ಎನಗೊಂದು ಗತಿಯ ತೋರಿಸಿ ಸದ್ವಿ ವೇಕಿಯನು ಮಾಡಯ್ಯ ಕೃಷ್ಣ ರಾಕೇಂದು ಮುಖಿ ದ್ರೌಪದಿಯ ಮಾನವನು ಕಾಯ್ದು ಆಕೆಗಕ್ಷಯವಿತ್ತೆ ಕೃಷ್ಣ ನಾ ಕಾಣುವಂದದಲಿ ಉಡುಪಿಯಾದಿಕೇಶವ ಏಕೆ ದರಶುನವೀಯೆ ಕೃಷ್ಣ