ಕೀರ್ತನೆ - 49     
 
ಶರಣು ಶರಣು ಶರಣು ದಶರಥ ರಾಮದೂತಗೆ ಶರಣು ಕುರುಕುಲಾಧೀಶಗೆ ಶರಣು ವೈಷ್ಣವ ಮತ ವಿಲಾಸಗೆ ಶರಣು ಮುಖ್ಯಪ್ರಾಣಗೆ ವಾರಿಧಿಯನು ವೇಗದಿ ದಾಟಿ ವನವ ಕಿತ್ತಿದಾತೆಗೆ ಮೇರೆಯಿಲ್ಲದೆ ಅಸುರರ ಸಂಹರಿಸಿದ ರಣಶೂರಗೆ ವಾರಿಜಾಕ್ಷಿ ಸೀತಾದೇವಿಗೆ ವರದ ಮುದ್ರಿಕೆಯನಿತ್ತಗೆ ಧೀರತನದಲಿ ಅಕ್ಷಕುಮಾರನ ಪ್ರಾಣವನು ಕೊಂಡಗೆ ರಾಜಸೂಯವ ರಚಿಸಬೇಕೆಂದು ರಾಜರ ಸೀಳಿದಾತಗೆ ರಾಜಮುಖಿಯಳ ರಕ್ಷಿಸಿ ಮೃಗರಾಜಗೆ ಒಲಿದಾತಗೆ ತ್ರಿಜಗವಂದಿತ ದೇವಗೆ ಸಜ್ಜನಪ್ರಿಯ ಎನಿಪಗೆ ರಾಜ ಧರ್ಮಗೆ ಅನುಜನಾದಗೆ ರಾಜಪೂಜಿತ ರಾಜಗೆ ಧಾರಿಣಿಯೊಳು ದುರ್ವಾದಿ ದೈತ್ಯರ ಗಂಟಲಗಾಣವಾದಗೆ ಮೂರೇಳು ಮತವನೆಲ್ಲ ಮುರಿದ ಧೀರ ಮಧ್ವರಾಯಗೆ ಸಾರ ತತ್ತ್ವಗಳನೆಲ್ಲ ಶೋಧಿಸಿ ಸೂರೆ ಮಾಡಿದಾತಗೆ ಊರ್ವಿಯೊಳು ವರ ದೇವತಾದಿಕೇಶವ ದೊರೆ ದಾಸಗೆ