ಕೀರ್ತನೆ - 28     
 
ಭಜಿಸಿ ಬದುಕೆಲೊ ಮಾನವ ಅಜ ಭವೇಂದ್ರಾದಿಗಳು ವಂದಿಸುವ ಪಾದವನು ಪಾಕಶಾಸನಗೊಲಿದು ಬಲಿಯ ಮೆಟ್ಟಿದ ಪಾದ ಕಾಕು ಶಕಟನ ಒದ್ದು ಕೊಂದ ಪಾದ ನಾಕ ಭೀಕರ ಬಕನ ಮೆಟ್ಟಿ ಸೀಳಿದ ಪಾದ ಲೋಕ ಪಾವನ ಗಂಗೆ ಪುಟ್ಟಿದ ಪಾದವನು ಶಿಲೆಯ ಸತಿಯಳ ಬಂಧವಿಮುಕ್ತಿಗೊಳಿಸಿದ ಪಾದ ಒಲಿದು ಪಾರ್ಥನ ರಥವನೊತ್ತಿದ ಪಾದ ಕಲಿ ಸುಯೋಧನನ ಓಲಗದಿ ಕೆಡಹಿದ ಪಾದ ಕಲಕಿ ಕಾಳಿಂಗನ ಪಡೆ ತುಳಿದ ಪಾದವನು ಗರುಡ ಶೇಷಾದಿಗಳು ಬಿಡದೆ ಪೊತ್ತಿಹ ಪಾದ ಧರೆಯನೀರಡಿ ಮಾಡಿ ಅಳೆದ ಪಾದ ಸಿರಿ ತನ್ನ ತೊಡೆಯ ಮೇಲಿರಿಸಿ ಒತ್ತುವ ಪಾದ ವರ ಕಾಗಿನೆಲೆಯಾದಿಕೇಶವನ ಪಾದವನು