ಕೀರ್ತನೆ - 1076     
 
ಎಂಬತ್ತು ನಾಲ್ಕು ಲಕ್ಷ ಯೋನಿ ಮುಖಂಗಳಲ್ಲಿ ಪುಟ್ಟಿ ಪುಟ್ಟಿ | ಪೊಂದಿ ಪೊಂದಿ ಬಳಲಿದೆನಯ್ಯ ನಾನು | ಸುಕೃತ-ದುಷ್ಕೃತವೆಂಬ ಉಭಯ ಕರ್ಮಗಳಲ್ಲಿ ತಾಪತ್ರಯದಲ್ಲಿ ಇರೆ ಉರೆ ಕಡು ನೊಂದೆನಯ್ಯ ನಾನು । ಇಪ್ಪತ್ತೊಂದು ಕೋಟಿ ನಾಯಕ ನರಕದಲ್ಲಿ ಕಾಲನವರಿಗೆ ಸಿಲುಕಿ | ಕಡುನೊಂದೆನಯ್ಯ ನಾನು । ಇನ್ನೇತಕೆ ಮಾನಿಸ ಜನ್ಮ ದೊರೆಕೊಂಬೆ | ಇನ್ನೇತಕೆ ನಿನ್ನವರಂಘ್ರಿ ದೊರೆಕೊಂಬೆ | ಇನ್ನು ನಿನ್ನ ಬಿಟ್ಟು ಬಾಳಲಾರೆನಯ್ಯ ನಾನು । ಮೊರೆ ಹೊಕ್ಕೆ ಪುರಂದರವಿಠಲ ಕಾಯ್ದುಕೊ ದಮ್ಮಯ್ಯ