ಕೀರ್ತನೆ - 836     
 
ಯಾಮರಾತ್ರಿಯೊಳು ನೀ ಸತ್ಕರ್ಮದ | ನೇಮವ ಮುಗಿಸಿ ಬಲು ಭಕುತಿಯಿಂದ | ಶ್ರೀಮುಕುಂದನಿಗೆ ಅರ್ಪಣವನು ಮಾಡಿ | ವಾಮಭಾಗದಿ ತನ್ನ ಸತಿಯಿಂದಲೊಡಗೂಡಿ | ಶ್ರಿಮನೋಹರನ ಸ್ತುತಿಸಿಕೊಳುತ । ಪ್ರೇಮದಿಂದಲಿ ನಿದ್ರೆಕಳೆದು ನಿತ್ಯ | ಕಾಮಿನಿಯಳ ಬಿಟ್ಟು ಪೃಥಕುಶಯನನಾಗೆ | ಭೂಮಿಯೊಳವನೇ ಪಾವನನೋ । ಯಾಮವ ಮೀರಿ ಮಾಡಿದ ಸಾಧನ | ಆ ಮಹಾದೈತ್ಯರು ಸೆಳೆದುಕೊಂಬರು | ಮಾಮನೋಹರನ ದಿನದಲ್ಲಿ ಅವರ | ಸ್ವಾಮಿತ್ವ ನೆಡೆವುದಿಲ್ಲ ಕಾಣಿರೋ । ಭೂಮಿಜಾಪತಿ ತನ್ನ ಚಕ್ರವ ತಿರುಗಿಸುವ ಕಾಮಕೆ ದೈತ್ಯರ ಅಳಿವುದಕ್ಕೆ ಪಾಮರ ಮನುಜರು ದಾಸವೇಷವ ಧರಿಸಿ । ನೇಮ ನಿತ್ಯಗಳೆಲ್ಲ ಪೋಗಾಡಿಸಿ । ಕಾಮಾಚಾರಿಗಳಾಗಿ ಕಂಡಲ್ಲಿ ಸಂಚರಿಸಿ | ಮಾಮನೋಹರನ ಲೀಲೆಯ ಪೇಳಿದರೇನೊ | ತಾಮಸದಾಸನೆಂದು ತಿಳಿಯೋ ಘೋರ । ತಮಸು ಅವಗಾಗುವದು ಸಂದೇಹವಿಲ್ಲ | ಈ ಮಹಿಯೊಳು ಮೃಷ್ಟಾನ್ನ ಭೋಜನ ವಸನ । ವೇ ಮಹಾಫಲವೆಂದು ಹಿಗ್ಗಿ ಕೆಟ್ಟು ಹೋಗುವನು । ಕಾಮಿತಪ್ರದದೇವ ಅಂಥಾದ್ದೆ ಅವನಿಗೆ । ನೇಮಿಸಿಪ್ಪನು ಅವನ ಯೋಗ್ಯತೆಯಂತೆ | ಸ್ವಾಮಿ ತನ್ನ ನಿಜದಾಸನಾದವನಿಗೆ ನಾಮಸುಧೆಯನುಣಿಸಿ । ಸಲಹುತಿಪ್ಪ | ಈ ಮಹಾಭಾಗ್ಯಕ್ಕೆ ಎಣೆಗಾಣೆ ಎಣೆಗಾಣೆ ಭ್ರಾಮಕನಾಗಿ ನೀ ಕೆಡಬೇಡವೋ । ಕಾಮಜನಕ ನಮ್ಮ ಪುರಂದರವಿಠಲನ್ನ | ಈ ಮನವೆಂಬ ಧಾಮದೊಳಗೆ ನಿಲ್ಲಿಸಿ | ಪೂಜೆಯ ಮಾಡುವುದು ಸುಖಕಾಣೆ