ಕೀರ್ತನೆ - 830     
 
ಯಾಮ ರಾತ್ರಿಯೊಳಗೆ ನೀ ಸತ್ಕರ್ಮದ | ನೇಮವ ಮುಗಿಸಿ ಬಲು ಭಕುತಿಯಿಂದ | ಶ್ರೀಮುಕುಂದನಿಗೆ ಅರ್ಪಣವನು ಮಾಡಿ | ವಾಮಭಾಗದಿ ತನ್ನ ಸತಿಯಿಂದ ಒಡಗೂಡಿ । ಶ್ರೀಮನೋಹರನ ಸ್ತುತಿಸಿಕೊಳುತಲಿ | ಪ್ರೇಮದಿಂದಲಿ ಕಳೆದು ನಿತ್ಯದಲಿ | ಕಾಮಿನಿಯಳ ಬಿಟ್ಟು ಪೃಥಕುಶಯನನಾಗೆ | ಭೂಮಿಯೊಳಗೆ ಅವನೇ ಪಾವನನು । ಯಾಮವು ಮೀರಿದ ಮೇಲೆ ಮಾಡಿದ ಪುಣ್ಯ | ಆ ಮಹಾದೈತ್ಯರು ಸೆಳೆದುಕೊಂಬರು ಕಾಣೋ | ಮಾಮನೋಹರನ ದಿನದಲ್ಲಿ ಮಾತ್ರ ಅವರ | ಸ್ವಾಮಿತ್ವ ನಡೆವುದಿಲ್ಲ ಹರಿ ಆಜ್ಞೆಯಲಿ । ಭೂಮಿಜಾಪತಿ ತನ್ನ ಚಕ್ರವ ತಿರುಗಿಸುವ |" ಕಾಮುಕ ದೈತ್ಯರ ಅಳಿವುದಕೆ | ಪಾಮರ ಮನುಜನು ದಾಸ ವೇಷವ ಧರಿಸಿ । ನೇಮನಿತ್ಯಗಳೆಲ್ಲ ಲೋಪವಿಡಿಸಿ | ಕಾಮಾಚಾರಿಗಳಾಗಿ ಕಂಡಲ್ಲಿ ಸಂಚರಿಸಿ | ಮಾಮನೋಹರನ (ಸ್ತುತಿ) ಪೇಳಿದರೇನು | ತಾಮಸ ದಾಸನೆಂದು ತಿಳಿಯೇ ಈಗ ಘೋರ ತಾಮಸ ಅಹುದೋ ಅವರಿಗೆ ಸಂದೇಹವಿಲ್ಲ | ಈ ಮಹಿಯೊಳಗೆ ಮೃಷ್ಟಾನ್ನಭೋಜನ ವಸನದಿಂ । ದೇ ಮಹಾಫಲವೆಂದು ಹಿಗ್ಗಿಕೊಳ್ಳುವನಯ್ಯ | ಕಾಮಿತಫಲ ದೇವ ಅಂಥಾದ್ದೆ ಅವನಿಗೆ ನೇಮಿಸಿ ಇಪ್ಪನು ಅವನ ಯೋಗ್ಯತೆಯಂತೆ | ಸ್ವಾಮಿ ತನ್ನ ನಿಜದಾಸರೆಂಬವರಿಗೆ | ನಾಮಸುಧೆಯನುಣಿಸಿ ಸಲಹುತ್ತಿಪ್ಪ | ಈ ಮಹಾಭಾಗ್ಯಕ್ಕೆ ಎಣೆಗಾಣೆ ಎಣೆಗಾಣೆ । ಭ್ರಾಮಕನಾಗಿ ನೀ ಕೆಡಬೇಡವೋ । ಕಾಮಜನಕ ನಮ್ಮ ಪುರಂದರವಿಠಲನ | ಸುಮ್ಮನವೆಂತೆಂಬ ಧಾಮದೊಳಗೆ ನಿತ್ಯ | ಪೂಜೆ ಮಾಡಿ ನಲಿದಾಡೊ