ಮನವೆ ಆಲಿಸಿಕೇಳೊ, ಬಿನ್ನಯಿಸುವೆನು ನಿನಗೆ |
ಚಿನುಮಯ ಮೂರುತಿಯ ಗುಣ ರೂಪ ನಾಮ ಕೀ-
ರ್ತನೆ ಮಾಳ್ವ ಬಗೆಯ ನಿನಗೆ ತಿಳಿಸುವೆನು |
ಘನವಾದ ಸುಸಾಧನವೆಂದು ತ್ರಿಕರಣಪೂರ್ವಕವಾಗಿ |
ಘನಮಹಿಮ ನಾರಾಯಣನ ಅಚಿಂತ್ಯಾದ್ಭುತ ಶಕ್ತಿ ।
ಅನುಭವಕೆ ತಂದುಕೊಂಡು ಸುಖಿಸುವುದು ।
ಮನ ಮೊದಲದ ಸರ್ವಇಂದ್ರಿಯಂಗಳ ಅ-
ವನ ಪಾದದಲ್ಲಿ ಇಟ್ಟು ಕೀರ್ತನೆ ಗೈಯೊ ।
ನಿನಗಿದೆ ಮುಖ್ಯ ಗತಿ ಸಾಧನವೆಂದು ಸಾರಿದೆ |
ಅನುಮಾನ ಮಾಡಸಲ್ಲ ಎಂದೆಂದಿಗೂ ।
ಬಿನುಗುದೈವಂಗಳ ಕಾಲಿಲೊದೆದು ಮಧ್ವ-
ಮುನಿಮತದಲಿ ದೀಕ್ಷಾಬದ್ಧನಾಗೊ ।
ಕುನರರ ನೆರಹಿಕೊಂಡು ಕುಚೇಷ್ಟೆ ಕಥೆಯ ಪೇಳಿ ।
ಘನ ಅಂಧಂತಮಸಿನೊಳು ಬೀಳದಿರು ||
ವನಜಭವಾಂಡದೊಳು ಹರಿದಾಸರ ದೀಕ್ಷೆ ಬಲುಕಷ್ಟಕಾಣೋ ।
ಮನುಜಾಧಮರಿಗೆ ಅದು ಸುಲಭವಲ್ಲವು ಕೇಳು |
ಇನಿತು ಇದರೊಳು ತ್ರಿವಿಧ ಬಗೆಯುಂಟು |
ಗುಣವಂತನಾಗಿ ನೀನು ಕಾಲಕ್ರಮಣ ಮಾಡೋ ।
ಅನುದಿನದಲ್ಲಿ ಹರಿಸೇವೆಗೆ ವಿಮುಖನಾಗದೆ |
ಮನಮುಟ್ಟೆ ಒಬ್ಬನೆ ಏಕಾಂತದಲಿ ಕುಳಿತು |
ತನುರೋಮಗಳು ಉಬ್ಬಿ ಆನಂದಾಶ್ರುಗಳಿಂದ ಗಾನವ ಮಾಡೊ ||
ಘನಜ್ಞಾನ ಪುಟ್ಟುವುದು ಅನಿಮಿಷರೀಶನ ದಯಕೆ ಪಾತ್ರನಪ್ಪೆ ॥
ದಿನದಿನಕೆ ಜ್ಞಾನವೆಗ್ಗಳವಹುದು ।
ನಿನಗೊಂದೆ ಪೀಳಿದೆ ಶುದ್ಧಸತ್ತ್ವದಾಶೆ_।
ಗುಣವನು ಮನಸಿಗೆ ತಂದುಕೊಂಡು ನೀ।
ಅನುಮಾನಬಿಟ್ಟು ನಿಶ್ಚಯವಾಗಿ ನಂಬೊ ಹರಿಯ
ಗುಣಗಣಾಂಬುಧಿ ನಮ್ಮ ಪುರಂದರವಿಠಲನು
ಅನುಸಾರಿಯಗಿ ನಿನ್ನ ಹಿಂದೆ ಮುಂದಿಹ ಕಾಣೊ
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ಆರ್ತಭಾವ