ಈಸು ಮುನಿಗಳಿದ್ದರೇನ ಮಾಡಿದರಯ್ಯ
ವ್ಯಾಸರಾಯ ಮಧ್ವಮತವನುದ್ಧರಿಸಿದ
ಕಾಶೀ ಗದಾಧರ ಮಿಶ್ರನ ಸೋಲಿಸಿ
ದಾಸನ್ನ ಮಾಡಿಕೊಂಡ ಧಾರುಣಿಯೊಳಗೆ
ಕಾಶೀ ಮಿಶ್ರ ಪಕ್ಷದರ ವಾಜಪೇಯ ನಾ
ರಸಿಂಹ ಲಿಂಗಣ್ಣ ಮಿಶ್ರ ಮೊದಲಾದ ವಿ
ದ್ವಾಂಸರು ನೂರೆಂಟು ಮಂದಿ ಬರಲು
ಜೈಸಿದೆ ಜಯಪತ್ರವ ಕೊಂಡು ಮೆರೆದೆ-
ವಾಸುದೇವ ಗೋಪಾಲ ಕೃಷ್ಣನಿಗೆ ವಿ
ಭೂಷಣವನು ಮಾಡಿ ಹಾಕಿಸಿದೆ-
ಶ್ರೀಶ ಶ್ರೀ ಪುರಂದರ ವಿಠಲರಾಯನನು
ಈಶ ಬೊಮ್ಮ ಇಂದ್ರಾದಿಗಳಿಗೆ
ಈಶನೆಂದು ಡಂಗುರ ಪೊಯಿಸಿ ಮೆರೆದೆ ಜಗವರಿಯೆ
ದಾಸರೊಳು ನೀ ಸಮರ್ಥನು ಸಂನ್ಯಾಸಿ ಶಿರೋಮಣಿ