ಯಮ ತನ್ನ ಪುರದಿ ಸಾರಿದನು ನಮ್ಮ
ಕಮಲನಾಭನ ದಾಸರ ಮುಟ್ಟದಿರಿ ಎಂದು
ಭುಜದಲೊಪ್ಪುವ ಶಂಖ ಚಕ್ರ ಮುದ್ರಾಂಕಿತ
ನಿಜ ದ್ವಾದಶನಾಮ ಧರಿಸಿಪ್ಪರ
ತ್ರಿಜಗವಂದಿತಳಾದ ತುಳಸೀ ಮಾಲಿಕೆಯುಳ್ಳ
ಸುಜನರ ಕೆಣಕದೆ ಸುಮ್ಮನೆ ಬನ್ನಿರೊ ಎಂದು
ತಾಳದಂಡಿಗೆ ಗೀತವಾದ್ಯ ಸಮ್ಮೇಳದಿ
ಊಳಿಗವನು ಮಾಳ್ವ ಹರಿದಾಸರ |
ಕೇಳಿದೊಡನೆ ಕರವೆತ್ತಿ ಮುಗಿದು ಯಮ
ನಾಳುಗಳೆಂದು ಹೇಳದೆ ಬನ್ನಿರೋ ಎಂದು
ಹೆಮ್ಮೆಯ ಸಿಡಿಯೇರಿ ಬೇವಿನುಡುಗೆಯುಟ್ಟು
ಚಿಮ್ಮುತ ಚೀರುತ ಬೊಬ್ಬೆಯಿಟ್ಟು
ಕರ್ಮಕೆ ಗುರಿಯಾಗಿ ಪ್ರಾಣಹಿಂಸೆಯ ಮಾಳ್ವ
ಬ್ರಹ್ಮೇತಿಕಾರನೆಳತನ್ನಿರೋ ಎಂದು
ಮಾತಾಪಿತರ ದುರ್ಮತಿಯಿಂದ ಬೈವರ
ಪಾತಕಿಗಳ ಪರದ್ರೋಹಿಗಳ
ನೀತಿಯಿಲ್ಲದೆ ವಿಮೋಹಿಸಿದವರ ಬಾಯೊಳು
ಒತ್ತಿ ಸೀಸವ ಕಾಸಿ ಹೊಯ್ದು ಕೊಲ್ಲಿರಿ ಎಂದು
ನರರ ಹಾಡಿ ಪಾಡಿ ನರರ ಕೊಂಡಾಡುವ
ನರಕಿಗಳ ಕೀಳುನಾಯ್ಗಳ ಮನ್ನಿಸುವ
ದುರುಳ ಜ್ಞಾನಿಜನರನೆಳೆತಂದು ಬಾಯೊಳು
ಅರಗನೆ ಕಾಯಿಸಿ ಹೊಯ್ದು ಕೊಲ್ಲಿರಿ ಎಂದು
ಕೇಶವ ಹರಿ ಎಂಬ ದಾಸರ ಹೃದಯದಿ
ವಾಸವಾಗಿಹ ಸಿರಿ ತಿರುಮಲೇಶ
ದಾಸರ ದಾಸರ ದಾಸನೆನಿಪ ಹರಿ
ದಾಸರನ್ನು ಕೆಣಕದೆ ಬನ್ನಿರೋ ಎಂದು
ಅನ್ಯಮಂತ್ರವ ಬಿಟ್ಟು ದೈವಮಂತ್ರವ ಭಜಿಸಿ
ಪನ್ನಗಶಯನನೆ ಗತಿಯೆನ್ನುತ
ತನ್ನ ಭಕ್ತರ ಕಾಯ್ದ ಪುರಂದರವಿಠಲನ
ಉನ್ನತದಲಿ ನಮಸ್ಕರಿಸಿ ಬನ್ನಿರೊ ಎಂದು
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ವಿಶೇಷ