ಆರು ಬಿಟ್ಟರೂ ನಿನ್ನ ಬಿಡದೆ ನಾ ನಂಬಿದೆ
ರಾಮರಾಮ - ಸ್ವಾಮಿ ।
ನೀ ಬಿಟ್ಟರಿನ್ನು ಆದಾರ ಸೇರಲು ಬೇಕೊ-
ರಾಮ ರಾಮ
ತುಂಬಿದ ನದಿಯಲಿ ಹರಿಗೋಲು ಮುಳುಗಿತೊ
ರಾಮ ರಾಮ - ಅಲ್ಲಿ
ಅಂಬಿಗನಾಶೆಯು ಅನುಗಾಲ ತಪ್ಪಿತೊ -
ರಾಮ ರಾಮ
ನಂಬಿ ಹಿಡಿದರೆ ಬಲು ಕೊಂಬೆಯು ಮುರಿಯಿತೊ-
ರಾಮ ರಾಮ - ಅಲ್ಲಿ
ಹಂಬಲಿಸಿದರೆ ಕೈ ಹಿಡಿವರ ನಾ ಕಾಣಿ ರಾಮ ರಾಮ
ಹಿಂದೆ ನೋಡಲು ಹೆಬ್ಬಾಹೊಟ್ಟಿ ಬರುತಿದೆ-
ರಾಮ ರಾಮ - ಇಲ್ಲಿ
ಮುಂದೆ ನೋಡಲು ಹೆಬ್ಬುಲಿ ಬಾಯ ತೆರೆದಿದೆ –
ರಾಮ ರಾಮ
ಇದಕಂಜಿ ಕಡಲ ಮಡುವ ಪೊಕ್ಕನೊ ಸ್ವಾಮಿ –
ರಾಮ ರಾಮ - ಅಲ್ಲಿ
ಅನುಭುತವಾದಂಥ ಆನೆಗಳು ನುಂಗುತಲಿವೆ –
ರಾಮ ರಾಮ
ಶಿಶುವುತನದಲಿ ಪಶುವ ನೀ ಕಾಯ್ದೆಯೊ - ರಾಮ ರಾಮ
ಅಸಮದಾಕಾರ ಶ್ರೀ ಪುರಂದರವಿಠಲ - ರಾಮ ರಾಮ