ಶೋಭನ ಶೋಭನವೆ ನಮ್ಮ
ಶ್ರೀಭೂದೇವಿಯರ ಅರಸು ವೆಂಕಟಗೆ
ಅಂದು ಕ್ಷೀರಾಂಬುಧಿಯನ್ನು ಮಥಿಸಲಾಗ
ಇಂದಿರೆ ಹರುಷದಿಂದುದಿಸಿ ಬಂದು ||
ಮಂದಾರ ಮಾಲೆಯ ಹಾಕಿದ ದೇವಗೆ
ಕಂದರ್ಪಕೋಟಿಲಾವಣ್ಯ ಮೂರುತಿಗೆ
ಜನಕನ ಮನೆಯಲ್ಲಿ ರಾಜಾಧಿರಾಜರು
ಎಣಿಕೆಯಿಲ್ಲದೆ ಬಂದಿರಲಾಗಿ ||
ಸನಕಾದಿವಂದ್ಯನ ಕಂಡು ಸಂತೋಷದಿ
ಜನಕಜೆ ಮಾಲೆಯ ಹಾಕಿದ ರಾಮಗೆ
ರುಕುಮನು ಶಿಶುಪಾಲಗೀವೆನೆಂಬ ಮಾತಿಗೆ
ಸಕಲ ರಾಯರು ಬಂದಿರಲಾಗಿ ||
ಭಕುತವತ್ಸಲನ ಕಂಡು ಸಂತೋಷದಿ
ರುಕುಮಿಣಿ ಮಾಲೆಯ ಹಾಕಿದ ಕೃಷ್ಣಗೆ
ಸತ್ಯಭಾಮೆ ನೀಳಾ ಭದ್ರಾ ಕಾಳಿಂದಿಯು
ಮಿತ್ರವಿಂದಾ ಲಕ್ಷಣಾ ಜಾಂಬವತಿ ||
ಮತ್ತೆ ಸೋಳಸಾಸಿರ ಗೋಪಿಕೆಯರ
ಪ್ರತ್ಯಕ್ಷವಾಳಿದ ಕಲ್ಯಾಣಗೆ
ಪದ್ಮದೇಶದಲೊಬ್ಬ ದೇವಾಂಗನೆಯು
ಪದ್ಮಮುಖಿಯು ಶ್ರುತಕೀರ್ತಿಯಾಗಿ |
ಪದ್ಮನಾಭ ಶ್ರೀ ಪುರಂದರವಿಠಲಗೆ
ಪದ್ಮಾವತೀಪ್ರಿಯ ಶ್ರೀನಿವಾಸಗೆ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಸಂಪ್ರದಾಯದ ಹಾಡುಗಳು