ಕೀರ್ತನೆ - 668     
 
ತೂಗಿರೆ ರಂಗನ್ನ ತೂಗಿರೆ ಕೃಷ್ಣನ ತೂಗಿರೆ ಅಚ್ಯುತಾನಂತನ ತೂಗಿರೆ ವರಗಿರಿ ಅಪ್ಪ ತಿಮ್ಮಪ್ಪನ ತೂಗಿರೆ ಕಾವೇರಿ ರಂಗಯ್ಯನ ಇಂದ್ರಲೋಕದೊಳುಪೇಂದ್ರ ಮಲಗಿಹನೆ ಬಂದೊಮ್ಮೆ ತೊಟ್ಟಿಲ ತೂಗಿರೆ ಮಂದಗಮನೆಯರು ಚೆಂದದಿ ಪಾಡುತ ನಂದನ ಕಂದನ ತೂಗಿರೆ ನಾಗಲೋಕದಲ್ಲಿ ನಾರಾಯಣ ಮಲಗಿಹನೆ ಹೋಗಿ ನೀವ್ ತೊಟ್ಟಿಲ ತೂಗಿರೆ ನಾಗವೇಣಿಯರು ನಾಲ್ಕು ನೇಣನು ಪಿಡಿದು ಭಾಗ್ಯವಂತನೆಂದು ತೂಗಿರೆ ಜಲಧಿಯೊಳಾಲದ ಎಲೆಯಲ್ಲಿ ಮಲಗಿದ ಚೆಲುವನ ತೊಟ್ಟಿಲ ತೊಗಿರೆ ಸುಲಭ ದೇವರ ದೇವ ಬಲಿಬಂಧಮೋಚಕ ಎಳೆಯನ ತೊಟ್ಟಿಲ ತೂಗಿರೆ ಸೂಸುವ ಮಡುವಿನೊಳ್ ಕಾಳಿಯನ ತುಳಿದಿಟ್ಟ ದೋಷವಿದೂರನ ತೂಗಿರೆ ಸಾಸಿರ ನಾಮದ ಸರ್ವೋತ್ತಮನೆಂದು ಲೇಸಾಗಿ ತೊಟ್ಟಿಲ ತೂಗಿರೆ ಅರಳೆಲೆ ಮಾಗಾಯಿ ಕೊರಳ ಪದಕ ಸರ ತರಳನ ತೊಟ್ಟಿಲ ತೂಗಿರೆ ಉರಗಾದ್ರಿವಾಸ ಶ್ರೀ ಪುರಂದರವಿಠಲನ ಹರುಷದಿ ಪಾಡುತ ತೂಗಿರೆ