ಜೋ ಜೋ ಶ್ರೀ ಕೃಷ್ಣ ಪರಮಾನಂದ
ಜೋ ಜೋ ಗೋಪಿಯ ಕಂದ ಮುಕುಂದ
ಪಾಲುಗಡಲೊಳು ಪವಡಿಸಿದವನೆ ಒಂ
ದಾಲದೆಲೆಯ ಮೇಲೆ ಮಲಗಿದ ಶಿಶುವೇ ॥
ಶ್ರೀ ಲತಾಂಗಿಯರ ಚಿತ್ತವಲ್ಲಭನೇ
ಬಾಲ ನಿನ್ನನು ಪಾಡಿ ತೂಗುವೆನಯ್ಯ ಜೋ ಜೋ
ಹೊಳೆಯುವ ರನ್ನದ ತೊಟ್ಟಿಲ ಮೇಲೆ
ಥಳ ಥಳಿಸುವ ಗುಲಗಂಜಿಯ ಮಾಲೆ ||
ಅಳದೆ ನೀ ಪಿಡಿದಾಡೆನ್ನಯ ಮುದ್ದು ಬಾಲ
ನಳಿನನಾಭನೆ ನಿನ್ನ ಪಾಡಿ ತೂಗುವೆನು ಜೋ ಜೋ
ಆರ ಕಂದ ನೀನಾರ ನಿಧಾನಿ
ಆರ ರತ್ನವೊ ನೀನಾರ ಮಾಣಿಕವೋ ॥
ಸೇರಿತು ಎನಗೊಂದು ಚಿಂತಾಮಣಿಯು - ಎಂದು
ಪೋರ ನಿನ್ನನು ಪಾಡಿ ತೂಗುವೆನಯ್ಯ - ಜೋ ಜೋ
ಗುಣನಿಧಿಯೇ ನಿನ್ನ ಎತ್ತಿಕೊಂಡಿದ್ದರೆ
ಮನೆಯ ಕೆಲಸವಾರು ಮಾಡುವರಯ್ಯ ॥
ಮನಸಿಗೆ ಸುಖನಿದ್ರೆ ತಂದುಕೊ ಬೇಗ
ಫಣಿಶಯನನೆ ನಿನ್ನ ಪಾಡಿ ತೂಗುವೆನು -ಜೋ ಜೋ
ಅಂಡಜವಾಹನ ಅನಂತ ಮಹಿಮ
ಪುಂಡರೀಕಾಕ್ಷ ಪರಮ ಪಾವನ ||
ಹಿಂಡು ದೈವದ ಗಂಡ ಉದ್ದಂಡ ದೇವನೆ
ಪಾಂಡುರಂಗ ಶ್ರೀ ಪುರಂದರವಿಠಲ ಜೋ ಜೋ