ಜೋ ಜೋ ಯಶೋದೆಯ ನಂದ ಮುಕುಂದನೆ
ಜೋ ಜೋ ಕಂಸಕುಠಾರಿ
ಜೋ ಜೋ ಮುನಿಗಳ ಹೃದಯಾನಂದನೆ
ಜೋ ಜೋ ಲಕುಮಿಯ ರಮಣ
ಹೊಕ್ಕುಳ ಹೂವಿನ ತಾವರೆಗಣ್ಣಿನ
ಇಕ್ಕಿದ ಮಕರಕುಂಡಲದ
ಜಕ್ಕುಳಿಸುವ ಕದಪಿನ ಸುಳಿಗುರುಳಿನ
ಚಿಕ್ಕ ಬಾಯ ಮುದ್ದುಮೊಗದ |
ಸೊಕ್ಕಿದ ಮದಕರಿಯಂದದಿ ನೊಸಲೊಳ
ಗಿಕ್ಕಿದ ಕಸ್ತೂರಿ ತಿಲಕ ।
ರಕ್ಕಸರೆದೆದಲ್ಲಣ ಮುರವೈರಿಯ
ಮಕ್ಕಳಮಾಣಿಕ್ಯ ಜೋ ಜೋ
ಕಣ್ಣ ಬೆಳಗು ಪಸರಿಸುತಿರೆ ಗೋಪಿ ಅರೆ
ಗಣ್ಣ ಮುಚ್ಚಿ ನೋಡಿ ನಗುತ |
ಸಣ್ಣ ಬೆರಳುಗಳ ಬಾಯೊಳಗಳವಡಿಸಿ
ಪನ್ನಗಶಯನ ತೊಟ್ಟಿಲಲಿ ॥
ನಿನ್ನ ಮಗನ ಮುದ್ದ ನೋಡು ಎಂದೆನುತಲಿ
ತನ್ನ ಪತಿಗೆ ತೋರಿದಳು |
ಹೊನ್ನ ಬಣ್ಣದ ಸೊಬಗಿನ ಖಣಿಯೆ ಹೊಸ
ರನ್ನದ ಬೊಂಬೆಯೆ ಜೋ ಜೋ
ನಿಡು ತೋಳ್ಗಳ ಪಸರಿಸುತಿರೆ ಗೋಪಿಯ
ತೊಡೆಯ ಮೇಲ್ಮಲಗಿ ಬಾಯ್ದೆರೆಯ ।
ಒಡಲೊಳಗೀರೇಳು ಭುವನವಿರಲು ಕಂಡು
ನಡುಗಿ ಕಂಗಳನು ಮುಚ್ಚಿದಳು ||
ಸಡಗರಿಸುತ ತಾನರಿಯದಂತೆಯೆ”
ಹೊಡೆ ಮರುಳಿ ಮೊಗವ ನೋಡುತಲಿ
ಕಡಲಶಯನ ಮೊಗವ ನೋಡುತಲಿ
ಕಡಲಶಯನ ಶ್ರೀ ಪುರಂದರವಿಠಲನು
ಬಿಡದೆ ನಮ್ಮೆಲ್ಲರ ರಕ್ಷಿಸುವ