ಕೀರ್ತನೆ - 664     
 
ಜಯಮಂಗಳಂ ನಿತ್ಯ ಶುಭಮಂಗಳಂ ಮಂಗಳ ಮಧು ಕೈಟಭಾಸುರ ಮರ್ದನಗೆ ಮಂಗಳ ಮದನಕೋಟಿಲಾವಣ್ಯಗೆ ॥ ಮಂಗಳ ಜಗದಂತರಂಗ ಕೃಪಾಂಗಗೆ ಮಂಗಳ ಯದುಕುಲೋತ್ತಮ ಸಾರ್ವಭೌಮಗೆ ಶ್ರೀವತ್ಸಲಾಂಛನಗೆ ಸಿರಿದೇವಿಯರಸಗೆ ಗೋವರ್ಧನೋದ್ಧಾರ ಗೋವಿಂದಗೆ || ಮಾವ ಕಂಸನ ಕೊಂದ ಮಕರಕುಂಡಲಧರ ಭಾವಜನಯ್ಯ ಚಿನ್ಮಯ ಮೂರ್ತಿಗೆ ಅಂಬುಜನಾಭಗೆ ಅಖಿಳಲೋಕೇಶಗೆ ಶಂಭು - ಅಜ-ಸುರ -ಮುನಿವಂದ್ಯ ಹರಿಗೆ || ಎಂಬತ್ತುನಾಲ್ಕು ಲಕ್ಷ ಜೀವರಾಶಿಗಳ ಬೊಂಬೆಯ ಮಾಡಿ ಕುಣಿಸುವ ದೇವಗೆ ಸಕಲಗುಣಪೂರ್ಣಗೆ ಸರ್ವಸ್ವಾತಂತ್ರ್ಯಗೆ ಅಕಳಂಕ ಆದಿ ನಿರ್ದೋಷ ಹರಿಗೆ || ಭಕುತವತ್ಸಲನಿಗೆ ಭವರೋಗವೈದ್ಯಗೆ ನಿಖಿಳ ಜೀವದಯಾಪರಿಪೂರ್ಣಗೆ ಪನ್ನಗಶಯನಗೆ ಪಾವನಮೂರ್ತಿಗೆ ಸನ್ನುತಾನಂತ ಸದ್ಗುಣಭರಿತಗೆ || ಎನ್ನೊಡೆಯ ಪುರಂದರವಿಠಲ ರಾಯಗೆ ತನ್ನ ನಂಬಿದವರ ಸಲಹುವ ಮೂರ್ತಿಗೆ