ಕೀರ್ತನೆ - 663     
 
ಜಯಮಂಗಳಂ ನಿತ್ಯ ಶುಭಮಂಗಳಂ ಗುರುಭಕ್ತಿಯೆಂತೆಂಬ ಗಮಕದೋಲೆಯನಿಟ್ಟು ಹರಿಧ್ಯಾನವೆಂಬ ಆಭರಣವಿಟ್ಟು || ಪರತತ್ತ್ವವೆಂತೆಂಬ - ಪಾರಿಜಾತವ - ಮುಡಿದು ಪರಮಾತ್ಮ ಹರಿಗೆ ಆರತಿಯೆತ್ತಿರೆ ಆದಿ ಮೂರತಿಯೆಂಬ ಅಚ್ಚ ಅರಿಸಿಣ ಬಳಿದು ವೇದಮುಖವೆಂಬ ಕುಂಕುಮವನಿಟ್ಟು ॥ ಸಾಧು - ಸಜ್ಜನ ಸೇವೆಯೆಂಬ ಸಂಪಿಗೆ ಮುಡಿದು ಮೋದದಿಂ ಲಕ್ಷ್ಮಿಗಾರತಿಯೆತ್ತಿರೆ ತನುವೆಂಬ ತಟ್ಟೆಯಲಿ ಮನದ ಸೊಡರನು ಇಡಿಸಿ ಘನಶಾಂತಿಯೆಂಬ ಆಜ್ಯವನು ತುಂಬಿ | ಆನಂದವೆಂತೆಂಬ ಜ್ಯೋತಿಯನು ಹಚ್ಚಿ ಚಿನುಮಯ ಹರಿಗೆ ಆರತಿಯೆತ್ತಿರೆ ಕಾಮಾಂಧವಳಿದಂತ ಕಮಲದ ತಟ್ಟೆಯಲಿ ನೇಮವೆಂತೆಂಬ ಹರಿದ್ರವನು ಕದಡಿ || ಆ ಮಹಾಸುಜ್ಞಾನವೆಂಬ ಸುಣ್ಣವ ಬೆರಸಿ ಸೋಮಧರವರದಗಾರತಿಯೆತ್ತಿರೆ ನಾರದವಂದ್ಯಗೆ ನವನೀತಚೋರಗೆ ನಾರಾಯಣಗೆ ಶ್ರೀ ವರಲಕ್ಷ್ಮಿಗೆ | ಸಾರಿದವರನು ಪೊರೆವ ಪುರಂದರವಿಠಲಗೆ ನೀರಜಮುಖಿಯರಾರತಿಯೆತ್ತಿರೆ