ಉಪ್ಪವಡಿಸಯ್ಯ ಹರಿಯೇ
ಏಳ್ಳೆ ಹೃಷೀಕೇಶ ಏಳು ರವಿ - ಶಶಿನಯನ
ಏಳು ಪಶುಗಳ ಕಾಯ್ದು ಪಾಲಿಸಿದೆ ಗೋಕುಲವ
ಏಳು ಸುರವಂದಿತನೆ ಏಳು ಭೂಸತಿರಮಣ
ಉಪ್ಪವಡಿಸಯ್ಯ ಹರಿಯೇ
ಪಚ್ಚೆ ಮುಡಿವಾಳಗಳು ಅಚ್ಚ ಸೇವಂತಿಗೆಯು
ಬಿಚ್ಚುಮಲ್ಲಿಗೆ ಜಾಜಿ ಸಂಪಿಗೆಯು ಪುನ್ನಾಗ
ಅಚ್ಚರಿಯ ಬಕುಲ ಕೆಂಜಾಜಿ ಕೇತಕಿ ಕುಸುಮಗುಚ್ಛಗಳ ಪಿಡಿದುಕೊಂಡು ||
ಅಚ್ಚ ಜಾಣೆಯರು ಶ್ರೀಗಂಧ ಕಸ್ತೂರಿ ಪುನುಗು
ಬಿಚ್ಚು ಬಿಳಿಯೆಲೆಯಡಿಕೆ ಪಿಡಿದು ನಿಂತಿಹರಯ್ಯ
ಮುಚ್ಚುತಿವೆ ತಾರೆಗಳು ಹೆಚ್ಚುತಿವೆ ರವಿಕಿರಣ ಅಚ್ಯುತನೆ ಉಪ್ಪವಡಿಸೊ ೧
ಚೆನ್ನೆಯರು ಚದುರೆಯರು ಸುಗುಣಸಂಪನ್ನೆಯರು
ಪನ್ನೀರು ತುಂಬಿರ್ದ ಪೊನ್ನ ತಂಬಿಗೆಗಳನು
ರನ್ನಗನ್ನಡಿಯನ್ನು ಪಿಡಿದು ನಿಂತಿರುವರೈ ಪನ್ನಂಗಶಯನ ಏಳ್ವೆ ॥
ಮನ್ನಣೆಯ ನಾರದರು ಮೊದಲಾದ ಮುನಿನಿಕರ
ನಿನ್ನ ಮಹಿಮೆಗಳನ್ನು ಪಾಡಿ ನಲಿಯುವರಯ್ಯ
ಇನ್ನು ಏಳೇಳು ಉದಯದ ಸಮಯ ಸಿರಿಯರಸ ಚೆನ್ನಿಗನೆ ಉಪ್ಪವಡಿಸೊ
ದೇವದುಂದುಭಿ ಮೊಳಗೆ ದೇವಕನ್ನೆಯರೆಲ್ಲ
ದೇವಾಂಗ ವಸ್ತ್ರವನು ಪಿಡಿದು ನಿಂತಿಹರಯ್ಯ
ದೇವದೇವೇಶ ನಿಮ್ಮೋಲಗದ ಸಂಭ್ರಮಕೆ ದೇವತೆಗಳೆಲ್ಲ ಕರೆದು ||
ದೇವ ಪ್ರಹ್ಲಾದ ಬಲಿ ಮುಖ್ಯರನು ಕಾಯ್ದವನೆ
ದೇವ ಬ್ರಹ್ಮನ ಪಡೆದ ದೇವಗಂಗೆಯ ಪಿತನೆ
ದೇವ ದೇವೋತ್ತಮನೆ ದೇವಾಧಿದೇವ ಪುರಂದರವಿಠಲ ಉಪ್ಪವಡಿಸೊ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಸಂಪ್ರದಾಯದ ಹಾಡುಗಳು