ಹೊಲೆಯ ಹೊರಗಹನೆ ಊರೊಳಗಿಲ್ಲವೆ
ಸಲೆ ಶಾಸ್ತ್ರವನು ತಿಳಿದು ಬಲ್ಲವರು ನೋಡಿ
ಭಾಳದಲಿ ಭಸಿತ ಭಂಡಾರವಿಡದವ ಹೊಲೆಯ
ಕೇಳಿ ಸಲೆ ಶಾಸ್ತ್ರವನು ತಿಳಿಯದವ ಹೊಲೆಯ
ಆಳಾಗಿ ಅರಸರಿಗೆ ಕೈಮುಗಿಯದವ ಹೊಲೆಯ
ಸೂಳೆಯರ ಕೂಡುವಾತನೇ ಶುದ್ಧ ಹೊಲೆಯ
ಇದ್ದ ಧನ ದಾನ ಧರ್ಮವ ಮಾಡದವ ಹೊಲೆಯ
ಕದ್ದು ತನ್ನೊಡಲ ಹೊರೆವಾತನೇ ಹೊಲೆಯ
ಬದ್ಧವಹ ನಡೆ - ನುಡಿಗಳಿಲ್ಲದಿದ್ದವ ಹೊಲೆಯ
ಮದ್ದಿಕ್ಕಿ ಕೊಲುವವನೆ ಮರುಳು ಹೊಲೆಯ
ಆಶೆಯನು ತೋರಿ ಭಾಷೆಗೆ ತಪ್ಪುವವ ಹೊಲೆಯ
ಲೇಸು ಉಪಕಾರಗಳನರಿಯದವ ಹೊಲೆಯ
ಮೋಸದಲಿ ಪ್ರಾಣಕ್ಕೆ ಮುನಿಯುವವನೇ ಹೊಲೆಯ
ಹುಸಿ ಮಾತನಾಡುವವನೇ ಸಹಜ ಹೊಲೆಯ
ಕೊಂಡ ಋಣವನು ತಿರುಗಿ ಕೊಡಲರಿಯದವ ಹೊಲೆಯ
ಭಂಡ ಮಾತುಳಾಡುವವನೆ ಹೊಲೆಯ
ಗಂಡ ಹೆಂಡಿರ ನಡುವೆ ಭೇದಗೈವವ ಹೊಲೆಯ
ಹೆಂಡರಿಚ್ಚೆಗೆ ನಡೆವ ಹೇಡಿ ಹೊಲೆಯ
ಪರಧನಕೆ ಪರಸತಿಗೆ ಅಳುಪಿದವನೇ ಹೊಲೆಯ
ಗುರು ಹಿರಿಯರನು ಕಂಡು ಎರಗದಿದ್ದವ ಹೊಲೆಯ
ಅರಿತು ಆಚಾರವನು ಮಾಡದಿದ್ದವ ಹೊಲೆಯ
ಪುರಂದರವಿಠಲನನು ನೆನೆಯದವ ಹೊಲೆಯ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ