ಕೀರ್ತನೆ - 641     
 
ಹುಚ್ಚುಕುನ್ನಿ ಮನವೇ ನೀ ಹುಚ್ಚುಗೊಂಬುದು ಘನವೇ ಕಚ್ಚುಕದತನವ ಬಿಟ್ಟು ಅಚ್ಯುತನ ಪದವ ಮುಟ್ಟು ಸ್ನಾನ ಮಾಡಿದರೇನು - ಸಂ ಧ್ಯಾನವ ಮಾಡಿದರೇನು ಹೀನತನವ - ಬಿಡಲಿಲ್ಲ ಸ್ವಾನುಭವ ಕೂಡಲಿಲ್ಲ ಜಪವ ಮಾಡಿದರೇನು- ನೀ ತಪವ ಮಾಡಿದರೇನು ಕಪಟ ಕಲ್ಮಷ ಕಳೆಯಲಿಲ್ಲ. ಕಾಮಿತಾರ್ಥ ಪಡೆಯಲಿಲ್ಲ. ಮೂಗು ಹಿಡಿದರೇನು- ನೀ ಮುಸುಕನಿಕ್ಕಿದರೇನು ಭೋಗಿಶಯನನುವರ್ತಿಸಲಿಲ್ಲ ದೇವಪೂಜೆ ಮಾಡಲಿಲ್ಲ ಗರುವನಾದರೇನು ನೀ ಗೊರವನಾದರೇನು ಗುರುವಿನ ಸ್ವಾಮ್ಯವ ತಿಳಿಯಲಿಲ್ಲ . ಗುರುವುಪದೇಶ ಪಡೆಯಲಿಲ್ಲ ಹೋಮ ಮಾಡಿದರೇನು- ನೀ ನೇಮವ ಮಾಡಿದರೇನು ರಾಮನಾಮ ಸ್ಮರಿಸಲಿಲ್ಲ ಮುಕುತಿ ಪಥವ ಪಡೆಯಲಿಲ್ಲ ನವದ್ವಾರವ ಕಟ್ಟು ನೀ ನಡುವಣ ಹಾದಿಯ ಮುಟ್ಟು ಅವಗುಣಗಳ ಬಿಟ್ಟು ಭಾನು ಮಂಡಲ ಮನೆಯ ಮುಟ್ಟು ಏನು ನೋಡಿದರೇನು ನೀ ನೇನ ಮಾಡಿದರೇನು ಧ್ಯಾನವನ್ನು ಮಾಡಲಿಲ್ಲ ಪುರಂದರ ವಿಠಲನ ಸ್ಮರಿಸಲಿಲ್ಲ