ಹರಿಯ ನೆನೆಯದ ನರಜನ್ಮವೇಕೆ ? ಶ್ರೀ
ಹರಿಯ ಕೊಂಡಾಡದ ನಾಲಿಗೆಯಿನ್ನೇಕೆ
ಸತ್ಯ - ಶೌಚವಿಲ್ಲದ ಆಚಾರವೇಕೆ ?
ಚಿತ್ತ ಶುದ್ದಿಯಿಲ್ಲದ ಜ್ಞಾನವೇಕೆ ?
ಭಕ್ತಿ- ಭಾನವಿಲ್ಲದ ದೇವಪೂಜೆ ಏಕೆ ?
ಉತ್ತಮರಿಲ್ಲದ ಸಭೆಯು ಇನ್ನೇಕೆ ?
ಕ್ರೋಧವ ಬಿಡದಿಹ ಸಂನ್ಯಾಸವೇಕೆ ?
ಆದರವಿಲ್ಲದ ಅಮೃತಾನ್ನವೇಕೆ ?
ವೇದ - ಶಾಸ್ತ್ರವಿಲ್ಲದ ವಿಪ್ರತನವೇಕೆ
ಕಾದಲಂಜುವನಿಗೆ ಕ್ಷಾತ್ರ ತಾನೇಕೆ ?
ಸಾಲದಟ್ಟುಳಿಯೆಂಬ ಸಂಸಾರವೇಕೆ ?
ಬಾಲಕರಿಲ್ಲದ ಭಾಗ್ಯವಿನ್ನೇಕೆ ?
ವೇಳೆಗೆ ಒದಗದ ನೆಂಟರಿನ್ನೇಕೆ ?ಅನು
ಕೂಲವಿಲ್ಲದ ಸತಿಯ ಸಂಗವೇಕೆ
ಮಾತೆ - ಪಿತರ ತೊರೆದ ಮಕ್ಕಳಿನ್ನೇಕೆ ?
ಮಾತು ಕೇಳದ ಮಗನ ಗೊಡವೆ ಇನ್ನೇಕೆ |
ನೀತಿ ತಪ್ಪಿದ ದೊರೆಯ ಸೇವೆ ಇನ್ನೇಕೆ ? ಅ
ನಾಥನಾಗಿರುವಗೆ ಕೋಪವಿನ್ನೇಕೆ ?
ಅಳಿದಳಿದುಳಿದಿಹ ಮಕ್ಕಳುಗಳಿನ್ನೇಕೆ ?
ತಿಳಿದು ಬುದ್ಧಿಯ ಹೇಳದ ಗುರುತನವೇಕೆ ?
ನಳಿನನಾಭ ಶ್ರೀ ಪುರಂದರವಿಠಲನ
ಚೆಲುವ ಮೂರುತಿಯ ಕಾಣದ ಕಂಗಳೇಕೆ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ