ಕೀರ್ತನೆ - 624     
 
ಹರಿಕಥಾಮೃತ ಸವಿಯ ಹರಿದಾಸರಲ್ಲದೆ ದುರುಳ ಮಾನವರದರ ಪರಿ ಬಲ್ಲರೇನಯ್ಯ ಸ್ತನ್ಯ ಪಾನದ ರುಚಿಯ ಚಿಣ್ಣರು ಬಲ್ಲರಲ್ಲದೆ ಮಣ್ಣ ಬೊಂಬೆಗಳದರ ಬಗೆ ಬಲ್ಲುವೆ ॥ ಅನ್ನಪಾನದ ರುಚಿಯ ಕೊನೆ ನಾಲಿಗೆಯಲ್ಲದೆ ಅಣಿ ಮಾಡಿಕೊಡುವ ಆ ಕರ ಬಲ್ಲುದೇನಯ್ಯ ನವನೀರದಾರ್ಭಟಕೆ ನವಿಲುಗಳು ನಲಿವಂತೆ ಕಾವು ಕಾವೆಂಬ ಕಾಕವು ಬಲ್ಲುದೆ ? । ದಿವಸಕರನುದಯಿಸಲು ಅರಳುವಬ್ಜಗಳಂತೆ ದಿವಸಾಂಧ ಪಕ್ಷಿಗಳು ಬಗೆಬಲ್ಲುವೇನಯ್ಯ ಮೊಲ್ಲೆ - ಮಲ್ಲಿಗೆ ಮುಡಿಯಬಲ್ಲ ಮಾನವರಂತೆ ಭಲ್ಲೂಕಗಳು ಅದರ ಬಗೆ ಬಲ್ಲುವೆ ? ಫುಲ್ಲಾಕ್ಷ ಶ್ರೀ ಪುರಂದರವಿಠಲರಾಯನನು ಬಲ್ಲ ಮಾನವರಲ್ಲದೆಲ್ಲರೂ ಬಲ್ಲರೆ ?