ಕೀರ್ತನೆ - 623     
 
ಹಮ್ಮುನಾಡಲಿಬೇಡ ಹಮ್ಮು ಈಡೇರದು ಹಮ್ಮಿನಿಂದಲಿ ನೀವು ಕೆಡಬೇಡಿರಯ್ಯ ಮುನ್ನೊಮ್ಮೆ ರಾವಣನು ಜನಕನಾ ಸಭೆಯಲ್ಲಿ ತನ್ನಳವನರಿಯದಲೆ ಧನುವೆತ್ತಲು ಉನ್ನತದ ಆ ಧನು ಎದೆಯ ಮೇಲೆ ಬೀಳಲು ಬನ್ನ ಬಟ್ಟುದ ನೀವು ಕೇಳಿಬಲ್ಲಿರಯ್ಯ ಕುರುಪತಿಯ ಸಭೆಯಲ್ಲಿ ಕೃಷ್ಣ ತಾ ಬರಲಾಗಿ ಕರೆದು ಮನ್ನಣೆಯನ್ನು ಮಾಡದಿರಲು ಧರೆಗೆ ಶ್ರೀಕೃಷ್ಣನಂಗುಟವನಂದೊತ್ತಲು ಅರಸು ಆಸನ ಬಿಟ್ಟು ಉರುಳಾಡಿದ ಅತಿ ವೇಗದಲಿ ಕೃಷ್ಣ ಸತ್ಯಭಾಮೆಯ ಕರೆದು ಸೀತೆ ನೀನಾಗೆಂದು ನೇಮಿಸಿದನು ಮತಿವಂತೆ ಬಗೆಬಗೆಯ ಶೃಂಗಾರವಾದರೂ ಸೀತಾಸ್ವರೂಪ ತಾನಾಗಲಿಲ್ಲ ಹನುಮನನು ಕರೆಯೆಂದು ಖಗಪತಿಯನಟ್ಟಲು ಮನದಲಿ ಕಡುಕೋಪದಿಂದ ನೊಂದು ವಾನರನೆ ಬಾಯೆಂದು ಗರುಡ ತಾ ಕರೆಯಲು ಹನುಮ ಗರುಡನ ತಿರುಹಿ ಬೀಸಾಡಿದ ಇಂತಿಂತು ದೊಡ್ಡವರು ಈ ಪಾಡು ಪಟ್ಟಿರಲು ಪಂಥಗಾರಿಕೆ ತರವೆ ನರಮನುಜಗೆ ? ಚಿಂತಾಯತನು ಚೆಲ್ವ ಪುರಂದರವಿಠಲನ ಸಂತತವು ನೆನೆ ನೆನೆದು ಸುಖಿಯಾಗೊ ಮನುಜ