ಹಂಚು ಬಲ್ಲುದೆ ಹಲ್ಲ ತೆಗೆದರಪಕಾರವನು
ಮಿಂಚುಳ್ಳ ಕಂಚು - ಕನ್ನಡಿಯಲ್ಲದೆ
ಕಳ್ಳ ಬಲ್ಲನೆ ತನ್ನ ಕರುಣದುಪಕಾರವನು ?
ಕೊಳ್ಳಿ ಬಲ್ಲುದೆ ತನ್ನ ಮನೆಯೆಂಬುದ ?
ಸುಳ್ಳ ಬಲ್ಲನೆ ಗ್ರಾಮದೊಳಗಣಾ ಸುದ್ದಿಯನು ?
ಬಳ್ಳಿಬಲೆ ಬಲ್ಲುದೇ ತನ್ನ ವನವೆಂಬುದನು ?
ಬಾಳಬಲ್ಲುದೆ ತಾನು ಮೇಲೊಗೆವ ಫಲಗಳನು ?
ಸೂಳೆ ಬಲ್ಲಳೆ ಮನೆಯ ಬಡತನಗಳ ?
ಖೂಳ ಬಲ್ಲನೆ ಜಾಣರೊಳಗೊಂದು ಸವಿನುಡಿಯ ?
ಕೇಳಬಲ್ಲನೆ ಕಿವುಡ ಏಕಾಂತವ ?
ಯೋಗಿ ಬಲ್ಲನೆ ಭೋಗದೊಳಗಣಾ ಸುದ್ದಿಯನು ?
ಭೋಗಿ ಬಲ್ಲನೆ ಕೆಲಸ - ಉದ್ಯೋಗವ ?
ಕಾಗೆಬಲ್ಲುದೆ ಕೋಗಿಲಂತೆ ಸ್ವರಗೈವುದನು ?
ಗೂಗೆ ಬಲ್ಲುದೆ ಹಗಲ ಹರಿದಾಟವ ?
ಕೋಣ ಬಲ್ಲುದೆ ಕುದುರೆಯಂತೆ ವೈಹಾಳಿಯನು ?
ಕಾಣಬಲ್ಲನೆ ಕುರುಡ ಕನ್ನಡಿಯನು ?
ದೀನವತ್ಸಲ ನಮ್ಮ ಪುರಂದರವಿಠಲನನು
ಕಾಣಬಲ್ಲನೆ ಜ್ಞಾನವಿಲ್ಲದವನು ?
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ