ಸುಲಭಪೂಜೆಯ ಕೇಳಿ ಬಲವಿಲ್ಲದವರು
ಕಾಲಕಾಲದ ಕರ್ಮ ಕಮಲಾಕ್ಷಗರ್ಪಿಸಿರಿ
ಇರುಳು ಹಚ್ಚುವ ದೀಪ ಹರಿಗೆ ನೀಲಾಂಜನವು ।
ಮರುವುಡುವ ಧೋತರವು ಪರಮವಸ್ತ್ರ ।।
ತಿರುಗಾಡಿ ದಣಿಯುವುದು ಹರಿಗೆ ಪ್ರದಕ್ಷಿಣೆಯು
ಮರಳಿ ಹೊಡೆಮರಳುವುದು ನೂರೆಂಟು ದಂಡ
ನುಡಿವ ಮಾತುಗಳೆಲ್ಲ ಪಾಂಡುರಂಗನ ಜಪವು
ಮಡದಿ ಮಕ್ಕಳು ಎಲ್ಲ ಒಡನೆ ಪರಿವಾರ ॥
ನಡುಮನೆಯೆ ಅಂಗಳವು ಉಡುಪಿ ಭೂವೈಕುಂಠ
ಎಡ ಬಲದ ಮನೆಯವರು ಕಡುಭಾಗವತರು
ಹೀಗೆ ಈ ಪರಿಯಲಿ ನಿತ್ಯ ನೀವರಿತಿರಲು
ಜಗದೊಡೆಯ ಶ್ರೀಕೃಷ್ಣ ದಯವ ತೋರುವನು |
ಬೇಗದಿ ತಿಳಿದು ಕೇಳಿ ಹೋಗುತಿದೆ ಆಯುಷ್ಯ
ಯೋಗಿ ಪುರಂದರವಿಠಲ ಸಾರಿ ಪೇಳಿದನು