ಸುಮ್ಮನೆ ಕಾಲವ ಕಳೆವರೆ -ಯಮ- ।
ಧರ್ಮರಾಯನ ದೂತರೆಳೆಯರೆ
ನರಿ - ನಾಯಿ ಜನುಮವು ಬಾರದೆ -ಹಾಗೆ ।
ನರಜನ್ಮದಲಿ ಬಂದು ಸೇರದೆ - ।।
ಹರಿಯ ಸ್ಮರಣೆ ಮಾಡಲಾರದೆ -ಸುಮ್ಮ
ನಿರಲು ಪಾಪದ ವಿಷವೇರದೆ |
ಬಾಲನಾಗಿದ್ದಾಗ ಬಹುಲೀಲೆ - ಮುಂದೆ
ಲೋಲನಾಗಿ ಬಾಳಿದ ಮೇಲೆ |
ಮೂಳ ವೃದ್ಧಾಪ್ಯ ಬಂತಾಮೇಲೆ -ಇನ್ನು-।
ಬಾಳುವುದೆಲ್ಲ ನೂಲಮಾಲೆ
ಮಡದಿ - ಮಕ್ಕಳ ಕೂಡಣ ಬಾಳು-ತನ್ನ
ಒಡಲಿಗಾಗೆ ತಾನು ಕರವಾಳು ||
ಬಿಡದೆ ಸಂಕೀರ್ತನೆ ಮಾಡೇಳು - ಮಿಕ್ಕಿ
ನುಡಿದ ನುಡಿಗಳೆಲ್ಲವು ಬೀಳು
ಮನೆಮನೆ ವಾರ್ತೆಯು ಸ್ಥಿರವಲ್ಲ
ಮನುಜರ ಮಾತೇನು ಘನವಲ್ಲ ||
ವನಜಸಂಭವಗೂ ನಿಶ್ಚಯವಿಲ್ಲ - ಮುಂದೆ
ಹನುಮಂತ ಪಟ್ಟಕೆ ಬಹನಲ್ಲ
ಇಂದಿನ ಹಮ್ಮು ನಾಳೆಗೆ ಇಲ್ಲ - ಭವ |
ಬಂಧನದೊಳು ಸಿಕ್ಕಿ ನರಳಿದೆನಲ್ಲ ||
ಮುಂದನರಿತು ನಡೆದುದಿಲ್ಲ - ಮೃತ್ಯು
ಬಂದಾಗ ಬಿಡಿಸಿಕೊಳ್ಳುವರಿಲ್ಲ।
ಮರಣವು ಆವಾಗ ಬರುವುದೋ - ತನ್ನ ।
ಶರೀರವು ಆವಾಗ ಮುರಿವುದೊ ||
ಕರಣಂಗಳೆಲ್ಲವು ಜರಿವುದೊ - ತನ್ನ |
ಗರುವದುಬ್ಬಸವೆಲ್ಲ ಮುರಿವುದೊ
ಮರಣಕಾಲಕೆ ಅಜಮಿಳನಾಗ - ತನ್ನ |
ತರಳನ ನಾರಗನೆಂದು ಕರೆದಾಗ |
ಕರುಣದಿ ವೈಕುಂಠ ಪದವೀಗ - ನಿತ್ಯ-।
ಪುರಂದರವಿಠಲನ ನೆನೆ ಬೇಗ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ