ಸತಿಗೆ ಸ್ವಾತಂತ್ರ್ಯವ ಕೊಡದಿರಿ ನೀವು
ಮತಿಗೆಟ್ಟು ಭ್ರಮೆಯ ಬಡದಿರಿ
ಪತಿಗೆ ಬಣ್ಣನೆ ಮಾತನಾಡ್ಯಾಳು - ತಾನು
ಮತಿಯಿಲ್ಲದೆ ಮೆಚ್ಚನಾಡಳು
ಅತಿ ಹರುಷದಲ್ಲಿ ಬಂದು ಕೂಡ್ಯಾಳು ಕೂಡಿ
ಖತಿ ಕರಕರೆಯನು ಮಾಡ್ಯಾಳು
ತಂದೆ ತಾಯ್ಗಳನೆಲ್ಲ ತೊರಿಸ್ಯಾಳು- ನೀ
ಒಂದೆಡೆ ಬಾಯೆಂದು ಬರಿಸ್ಯಾಳು
ನಿಂದಿಸಿ ಬಯ್ಯುತ್ತ ಬೆರೆಸ್ಯಾಳು ನಿನ್ನ
ನೊಂದು ಪಡಿ ಭತ್ತಕೆ ಬಾಯ ತೆರೆಸ್ಯಾಳು
ತಂದಿದ್ದರೊಳಗರ್ಧ ಕದ್ದಾಳು ಕದ್ದು
ತಂದು ಸುಳ್ಳುಹೇಳಿ ಮೆದ್ದಾಳು
ಮುಂದಿದ್ದ ಕೂಸಿನ ಹೊದ್ದಾಳು - ಹತ್ತು
ಮಂದಿ ಮುಂದೆ ಅಡ್ಡಬಿದ್ದಾಳು
ಉಂಡ ಊಟವನೆಲ್ಲ ನೆನೆಸ್ಯಾಳು - ತನ್ನ
ಮಂಡೆ ಕೆದರಿಕೊಂಡು ಸೆಣಿಸ್ಯಾಳು
ಭಂಡು ಮಾಡಿ ಬಾಯಿ ತೆರಿಸ್ಯಾಳು - ನಿನ್ನ
ಕೊಂಡ ಕೋತಿಯಂತೆ ಕುಣಿಸ್ಯಾಳು
ಕರೆಕರೆ ಸಂಸಾರ ಸ್ಥಿರವಲ್ಲ - ಈ
ದುರುಳ ಹೆಣ್ಣಿನ ಸಂಗ ಸುಖವಿಲ್ಲ
ನೆರೆಹೊರೆಯವರು ನಗುವರೆಲ್ಲ – ನಮ್ಮ
ಪುರಂದರವಿಠಲನು ತಾ ಬಲ್ಲ