ಕೀರ್ತನೆ - 609     
 
ಸಕಲವೆಲ್ಲವು ಹರಿಸೇವೆಯೆನ್ನಿ ರುಕುಮಿಣಿಯ ರಮಣ ವಿಠಲನಲ್ಲದಿಲ್ಲವೆನ್ನಿ ನುಡಿಗಳೆಲ್ಲವು ನಾರಾಯಣನ ಕೀರ್ತನೆಯೆನ್ನಿ ನಡೆವುದೆಲ್ಲವು ಹರಿಯಾತ್ರೆಯೆನ್ನಿ | ಕೊಡುವುದೆಲ್ಲವು ಕಾಮಜನಕಗರ್ಪಿತವೆನ್ನಿ ಎಡೆಯ ಅನ್ನವು ಶ್ರೀಹರಿಯ ಪ್ರಸಾದವೆ ಹೊಸವಸ್ತ್ರ ಉಡುವಲ್ಲಿ ಹರಿಯ ಬೆಳ್ಳುಡೆಯೆನ್ನಿ ಕುಸುಮ ಪರಿಮಳವು ಕಂಜನಾಭಗೆನ್ನಿ । ಎಸೆವಾಭರಣವು ಯಶೋದೆನಂದನಗೆನ್ನಿ ಶಶಿಮುಖಿಯರ ಕೂಟ ಸೊಬಗು ಗೋವಳಗೆನ್ನಿ ಆಟಪಾಟಗಳೆಲ್ಲ ಅಂತರ್ಯಾಮಿಗೆಯೆನ್ನಿ ನೋಟ ಬೇಟಗಳೆಲ್ಲ ನಾಟಕಧಾರಿಗೆನ್ನಿ ॥ ನೀಟಾದ ವಸ್ತುಗಳೆಲ್ಲ ಕೈಟಭಮರ್ದನಗೆನ್ನಿ ಕೋಟಲೆ ಸಂಸಾರ ಕಪಟನಾಟಕಗೆನ್ನಿ ನಿದ್ರೆ ಜಾಗರವು ಸಮುದ್ರಶಯನಗೆನ್ನಿ ಭದ್ರಗಜನಿಧಿ ವರದಗೆನ್ನಿ ರೌದ್ರದಾರಿದ್ರವು ರಾಘವನ ಮಾಯೆಯೆನ್ನಿ ಶ್ರೀ ಮುದ್ರೆ ಧರಿಸಿದವ ಹರಿದಾಸನೆನ್ನಿ ಅಣು ರೇಣು ತೃಣ ಕಾಷ್ಠ ಪರಿಪೂರ್ಣನಹುದೆನ್ನಿ ಎಣಿಸಬಾರದನಂತಮಹಿಮನೆನ್ನಿ ಸೆಣಸುವ ರಕ್ಕಸರ ಶಿರವ ಚಂಡಾಡುವ ಪ್ರಣವಗೋಚರ ಪುರಂದರವಿಠಲರಾಯನೆನ್ನಿ