ಶಕ್ತನಾದರೆ ನಂಟರೆಲ್ಲ ಹಿತರು - ಅ
ಶಕ್ತನಾದರೆ ಆಪ್ತರವರೆ ವೈರಿಗಳು
ಕಮಲಾರ್ಕರಿಗೆ ನಿರುತ ಕಡುನಂಟುತನವಿರಲು
ಕಮಲ ತಾ ಜಲದೊಳಗೆ ಆಡುತಿಹುದು
ಕ್ರಮತಪ್ಪಿ ನೀರಿನಿಂದ ತಡಿಗೆ ಬೀಳಲು ರವಿಯ
ಅಮಿತ ಕಿರಣಗಳಿಂದ ಕಂದಿ ಪೋಗುವುದು
ವನದೊಳುರಿ ಸುಡುತಿರಲು ವಾಯು ತಾ ಸೋಂಕಲ್ಕೆ
ಘನ ಪ್ರಜ್ವಲಿಸುತಿಹುದು ಗಗನಕಡರಿ
ಮನೆಯೊಳಿರ್ದಾ ದೀಪ ಮಾರುತನು ಸೋಂಕಿದರೆ
ಘನಶಕ್ತಿ ತಪ್ಪಿ ತಾ ನಂದಿ ಹೋಗುವುದು
ವರದ ಶ್ರೀ ಪುರಂದರವಿಠಲನ ದಯವಿರಲು
ಸರುವ ಜನರೆಲ್ಲ ಮೂಜಗದಿ ಹಿತರು
ಕರಿಯ ಸಲಹಿದ ಹರಿಯ ಕರುಣ ತಪ್ಪಿದ ಮೇಲೆ
ಮೊರೆಹೊಕ್ಕರೂ ಕಾಯ್ವ ಮಹಿಮರುಂಟೇ ದೇವ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ