ವೈದ್ಯ ಬಂದ ನೋಡಿ - ವೆಂಕಟನೆಂಬ
ವೈದ್ಯ ಬಂದ ನೋಡಿ
ವೈದ್ಯ ಬಂದನು ವೇದವೇದ್ಯ ನೋಡೀಗಲೇ
ಶ್ರೀದೇವಿರಮಣನು ಶ್ರೀನಿವಾಸನೆಂಬ
ಎಷ್ಟು ದಿನದ ರೋಗಗಳೆಂಬುದ ಬಲ್ಲ |
ಗಟ್ಟಿಯಾಗಿ ಧಾತುರಸಗಳನು ಬಲ್ಲ ||
ಕಷ್ಟ ಬಡಿಸದಲೆನ್ನ ಭವರೋಗ ಬಿಡಿಸುವ |
ಶಿಷ್ಟವಾದ ದೇಹ ಕೊಟ್ಟು ಕಾಯುವನಿವ
ಹೊನ್ನು - ಹಣಂಗಳ ಅನ್ನವ ಅನುಸರಿಸಿ |
ತನ್ನ ದಾಸನೆಂಬ ನಿಜವ ನೋಡಿ ||
ಚೆನ್ನಾಗಿ ಜಿಹ್ವೆಗೆ ಸ್ವಾದವಾಗಿರುವಂಥ ।
ತನ್ನ ನಾಮಾಮೃತ ದಿವ್ಯ ಔಷಧವೀವ
ಈತ ದಿಟ್ಟಿಸಿ ನೋಡೆ ಎಳ್ಳಷ್ಟು ರೋಗವಿಲ್ಲ ।
ಈ ತನುವಿಗೆಂದೆಂದು ರೋಗಬರಲರಿಯದು ||
ಈತ ಅನಂತರೂಪದಿ ಜೀವರಿಗೆ ಮುನ್ನ |
ಪ್ರೀತಿಯಿಂದಲಿ ಭವರೋಗ ಬಿಡಿಸುವ
ಧರ್ಮವೈದ್ಯನಿವ ಜಗಕ್ಕೆಲ್ಲ ಒಬ್ಬನೆ ।
ಮರ್ಮಬಲ್ಲ ರೋಗಜೀವಂಗಳ |
ನಿರ್ಮಲವಾಗಿಹ ತನ್ನ ನಾಮಸ್ಮರಣೆ ।
ಒಮ್ಮೆ ಮಾಡಲು ಭವರೋಗ ಬಿಡಿಸುವ
ಅನ್ಯ ವೈದ್ಯನೇಕೆ ಅನ್ಯ ಔಷಧವೇಕೆ ? |
ಅನ್ಯ ಮಂತ್ರ - ತಂತ್ರ - ಜಪವೇತಕೆ ? |
ಚೆನ್ನ ಪುರಂದರವಿಠಲನ್ನ ನೆನೆದರೆ |
ಮನ್ನಿಸಿ ಸಲಹುವ ವೈದ್ಯಶಿರೋಮಣಿ