ವಾರಿಜನಾಭನ ಕರುಣವೆ ಸ್ಥಿರ ಸಂ
ಸಾರವು ಎರವು ಕೇಳಾತ್ಮಾ |
ಜಾರುತಿದೆ ಆಯುಷ್ಯ ದೂರದ ಮುಕುತಿಗೆ
ದಾರಿ ಯಾವುದು ಪೇಳಾತ್ಮಾ
ಸತಿ ಸುತರೆಂಬಾಶೆಯ ಬಿಡು ಮುಂದಿನ 1
ಹಿತವರವರುಂಟೇನಾತ್ಮಾ ॥
ಮತಿಗೆಟ್ಟು ಕೆಡಬೇಡ ಮರಣ ತಪ್ಪದು ಮುಂದೆ |
ಗತಿಯಾವುದು ಹೇಳಾತ್ಮ ?
ಎರವಿನ ಸಿರಿಗೆ ನೀ ಬಿರಿಬಿರಿದು ಬಿಚ್ಚುವೆ ।
ನೀರ ಕಡೆದರೆ ಬೆಣ್ಣೆಯುಂಟೇನಾತ್ಮ ॥
ಉರಗನ ಹೆಡೆಯಲಿ ನೆರಳ ಕೋರಿದ ಕಪ್ಪೆ ।
ಸ್ಥಿರವೆಂದು ಬಗೆವರೇನಾತ್ಮಾ ?
ಆನೆ ಕುದುರೆ ಒಂಟೆ ಸೇನೆ ಭಾಂಡಾರವ
ಏನು ಪಡೆದರೇನಾತ್ಮಾ ॥
ನಾನಾಪರಿಯಿಂದ ಕಳೆದು ಉಳಿದು ಮುನ್ನ
ಹಾನಿ ತಪ್ಪದು ಕೇಳಾತ್ಮ
ಕೆರೆಯ ಕಟ್ಟಿಸು ಪೂದೋಟವ ಹಾಕಿಸು ।
ಸೆರೆಯ ಬಿಡಿಸು ಪುಣ್ಯಾವಾತ್ಮಾ ॥
ಮರೆಯದೆ ಮನೆಗೆ ಬಂದವರಿಗನ್ನವನಿತ್ತು ||
ಪರಮಪದವಿ ಕಂಡೆಯಾತ್ಮಾ
ಲೆತ್ತ - ಪಗಡೆ- ಚದುರಂಗ ಜೂಜಾಟವ ।
ಮತ್ತಾಡಿ ಕೆಡಬೇಡವಾತ್ಮಾ ||
ಭಕ್ತಿಯಲಿ ಪುರಂದರವಿಠಲನ ನೆನೆದರೆ 1
ಮುಕ್ತಿಸಾಧನ ಕಂಡೆಯಾತ್ಮಾ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ