ಕೀರ್ತನೆ - 593     
 
ರಾಮ ಗೋವಿಂದ ಸೀತಾ ರಾಮ ಗೋವಿಂದ ತೃಪ್ತಿಯಹುದೆ ಹೆತ್ತ ತಾಯಿ ಇಕ್ಕದನಕ ಭಕ್ತಿಯಹುದೆ ಭಕ್ತಜನರ ಸಲಹದನಕ ಮುಕ್ತಿಯಹುದೆ ಭಾವಶುದ್ದಿ ಇಲ್ಲದನಕ ಚಿತ್ತಶುದ್ಧಿ ಆತ್ಮನಿಜವು ತಿಳಿಯದನಕ ಓದಲೇಕೊ ಮನದಿ ಜ್ಞಾನವಿಲ್ಲದನಕ ಭೇದವೇಕೊ ಗತಿಯು ಗಮನ ತಿಳಿಯದನಕ ಕಾದಲೇಕೊ ಭುಜದಿ ಶಕ್ತಿಯಿಲ್ಲದನಕ ವಾದವೇಕೊ ಶ್ರುತಿ - ಶಾಸ್ತ್ರ ತಿಳಿಯದನಕ ನಳಿನವಿದ್ದರೇನು ತುಂಬಿಯೊದಗದನಕ ದಳವು ಇದ್ದರೇನು ಧೈರ್ಯಕೊಡದನಕ ಲಲನೆಯಿದ್ದರೇನು ಪುತ್ರರಿಲ್ಲದನಕ ಚೆಲುವನಾದರೇನು ವಿದ್ಯೆ ಕಲಿಯದನಕ ವನವಿದ್ದೇಕೊ ಶುಕ ಪಿಕವಿಲ್ಲದನಕ ತನುವಿದ್ದೇಕೊ ಪರಹಿತಕೆ ಬಾರದನಕ ಮನೆಯಿದ್ದೇಕೊ ಅತಿಥಿಯೊಬ್ಬರಿಲ್ಲದನಕ ಧನವಿದ್ದರೇನು ದಾನ – ಧರ್ಮಕ್ಕೊದಗದನಕ ಹರಿಯ ಚಿಂತೆಯಿರಲು ಅನ್ಯ ಚಿಂತೆಯೇತಕೊ ಹರಿಯ ಧ್ಯಾನವಿರಲು ಅನ್ಯ ಧ್ಯಾನವೇತಕೊ ಸಿರಿ ಪುರಂದರವಿಠಲನಿರಲು ಭಯವು ಏತಕೊ ಹರಿಯು ಒಲಿದ ಮನುಜನಿಗೆ ದೈನ್ಯವೇತಕೊ