ಕೀರ್ತನೆ - 589     
 
ಮುತ್ತೈದೆಯಾಗಿರಬೇಕು ಮುದದಿಂದಲಿ । ಹತ್ತುನೂರು ನಾಮದೊಡೆಯ ಹರಿ ನಮ್ಮ ಪತಿಯೆಂದು . ಗುರುಮಧ್ವಶಾಸ್ತ್ರವನು ಓದುವುದೆ ಮಾಂಗಲ್ಯ | ವರವೈರಾಗ್ಯವೆಂಬ ಒಪ್ಪುವ ಮೂಗುತಿ ॥ ತಾರತಮ್ಯದರಿಮೆ ತಾಯಿತಿ ಮುತ್ತುಸರ | ಕರುಣರಸಗಳೆ ಉಳ್ಳ ಕಟ್ಟಾಣಿ ಕಟ್ಟಿಕೊಂಡು ಹರಿಕಥೆಯ ಕೇಳುವುದೆ ಕಿವಿಗೆ ಮುತ್ತಿನ ಓಲೆ | ನಿರುತ ಸತ್ಕರ್ಮವೇ ನಿಜಕಾಂತಿಯು ॥ ಪರಮ ಭಕ್ತರ ಪಾದರಜ ಹರಳು ಬಂಗಾರ | ಗುರುಭಕುತಿಯೆಂಬಂಥ ಗಂಧ ಕುಂಕುಮ ಧರಿಸಿ ಪೊಡವಿಯೊಳು ಪರಹಿತದ ಪಟ್ಟವಾಳಿಯನುಟ್ಟು | ಕೊಡುವ ಧರ್ಮವೆಂಬ ಕುಪ್ಪಸವ ತೊಟ್ಟು ॥ ಬಿಡದೆ ಎನ್ನೊಡೆಯ ಶ್ರೀ ಪುರಂದರವಿಠಲನ । ದೃಢ ಭಕ್ತಿಯೆಂಬಂಥ ಕಡಗ - ಬಳೆ ಇಟ್ಟುಕೊಂಡು