ಮರೆಯದಿರು ಶ್ರೀ ಹರಿಯನು
ಮರೆಯದಿರು ಶ್ರೀ ಹರಿಯ ಮರಣಾತುರದಿ ಮಗನ
ಕರೆದವಗೆ ಸಾಯುಜ್ಯವಿತ್ತ ನಾರಾಯಣನ
ಸ್ಮರಣೆಯನು ಮಾಡುವರ ಚರಣ ಸೇವಕರಿಗೆ
ಪರಮ ಪದವೀವ ಹರಿಯ
ದೇವಕಿಯ ಬಂಧವನು ಪರಿದವನ ಪೂತನಿಯ
ಜೀವರಸವೀಂಟಿದನ ಮಾವನನು ಮಡುಹಿದನ
ಪಾವನ ತರಂಗಿಣಿಯ ಪದನಖದಿ ಪಡೆದವನ
ಗೋವರ್ಧನೋದ್ಧಾರನ |
ದಾವಾನಲನ ಪಿಡಿದು ನುಂಗಿದನ ಲೀಲೆಯಲಿ
ಗೋವತ್ಸ ಗೋಪಾಲ ರೂಪವನು ತಾಳ್ದವನ
ದೇವಮುನಿ ಮುಖ್ಯ ಸುರರಾರಾಧಿಸುವನ ಶ್ರೀಪಾದವನು
ಭಜಿಸು ಮನವೆ
ಕಂಜಸಂಭವಪಿತನ ಕರುಣಾಪಯೋನಿಧಿಯ
ಕುಂಜರನ ನುಡಿ ಕೇಳಿ ಒದಗಿದನ ರಣದೊಳು ಧ-
ನಂಜಯನ ಜೀವವಂ ಕೃಪೆಯಿಂದ ಕಾಯ್ದವನ
ಆಂಜನೇಯನನಾಳ್ದನ ||
ರಂಜಿಸುವ ಕೌಸ್ತುಭವಿಭೂಷಣನ ಜಲಧಿಯಲಿ
ನಂಜಿನೊಡೆಯನ ಮೇಲೆ ಮಲಗಿದನ ತಮದೊಳಗೆ ಪ
ರಂಜ್ಯೋತಿಮಯನಾಗಿ ಬೆಳಗುವನ
ಶ್ರೀಚರಣಕಂಜವಂ ಭಜಿಸು ಮನವೆ
ವಾರಿಧಿಯೊಳಾಡಿದನ ವರಗಿರಿಯ ತಾಳಿದನ
ಧಾರಿಣಿಯ ತಂದವನ ದೈತ್ಯನನು ಕೊಂದವನ
ಮೂರಡಿಯಲಳೆದವನ ಮೊನೆಗೊಡಲಿ ಪಿಡಿದವನ ನೀರಧಿಯ
ಬಂಧಿಸಿದನ||
ದ್ವಾರಕೆಯನಾಳ್ಳವನ ತ್ರಿಪುರಗಳ ಜಗುಳ್ದವನ
ಚಾರುಹಯವೇರಿದನ ಸಕಲ ಸುಜನರ ಪೊರೆವ
ಧೀರ ಪುರಂದರವಿಠಲನ ಚರಣಕಮಲವನು
ನಂಬಿ ನೀ ಭಜಿಸು ಮನವೇ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ