ಬೇವ ಬೆಲ್ಲದೊಳಿಡಲೇನು ಫಲ
ಹಾವಿಗೆ ಹಾಲೆರೆದೇನು ಫಲ ?
ಕುಟಿಲವ ಬಿಡದಲೆ ಕುಜನರು ಮಂತ್ರವ
ಪಠನೆಯ ಮಾಡಿದರೇನು ಫಲ?
ಸಟೆಯನ್ನಾಡುವ ಮನುಜರು ಮನದಲಿ
ವಿಠಲನ ನೆನೆದರೆ ಏನು ಫಲ ?
ಮಾತಾ ಪಿತೃಗಳ ಬಳಲಿಸುವಾತನು
ಯಾತ್ರೆಯ ಮಾಡಿದರೇನು ಫಲ ?
ಘಾತಕತನವನು ಬಿಡದೆ ನಿರಂತರ
ನೀತಿಯನೋದಿದರೇನು ಫಲ ?
ಕಪಟತನದಲಿ ಕಾಡುವರೆಲ್ಲರು
ಜಪಗಳ ಮಾಡಿದರೇನು ಫಲ ?
ಕುಪಿತ ಬುದ್ಧಿಯನು ಬಿಡದೆ ನಿರಂತರ
ಉಪವಾಸ ಮಾಡಿದರೇನು ಫಲ ?
ಪತಿಗಳ ನಿಂದಿಸಿ ಬೊಗಳುವ ಸತಿಯರು
ವ್ರತಗಳ ಮಾಡಿದರೇನು ಫಲ ?
ಅತಿಥಿಗಳೆಯಡೆಯಲಿ ಭೇದವ ಮಾಡಿ ಸ
ದ್ಗತಿಯನು ಬಯಸಿದರೇನು ಫಲ ?
ಹೀನ ಗುಣಂಗಳ ಬಿಡದೆ ನದಿಯೊಳು
ಸ್ನಾನವ ಮಾಡಿದರೇನು ಫಲ ?
ಜ್ಞಾನಿ ಪುರಂದರವಿಠಲನ ನೆನೆಯದೆ
ಮೌನವ ಮಾಡಿದರೇನು ಫಲ?
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ