ನೆಚ್ಚಬೇಡ ಭಾಗ್ಯವನು ಹುಟ್ಟುಗೊಂಡ ಮನುಜಾ
ವೆಚ್ಚವಾಗಿ ಹೋಗುವುದು ಏಸೊಂದು ಬಗೆಯಲಿ
ಮುತ್ತು - ಮಾಣಿಕ ನವರತ್ನದ ಗದ್ದುಗೆಯು
ಎತ್ತ ನೋಡಲು ಸಿರಿ ಕೋ ಎನುತಲಿ
ಸತ್ಯ ಹರಿಶ್ಚಂದ್ರ ಮತ್ತೆ ಸುಡುಗಾಡಿನಲ್ಲಿ
ಎತ್ತುವ ಹಣೆಯಕ್ಕಿ ಹಾಗದ ಕಾಸ
ದೇವತೆಗಳ ಕೈಯ ಸೇವೆಯ ಕೊಳುತಿರ್ದ
ರಾವಣನ ಬದುಕು ಮತ್ತೇನಾಯಿತು
ಜೀವದ ಪರಿಯರಿತು ನಾವು ದೊರೆಯೆಂಬುವುದೆ
ಸಾವಿನ ಮನೆಹೊಕ್ಕು ಸಾಹಸ ಪಡಲೇಕೆ
ಹದಿನೆಂಟುಕೋಟಿ ಧನ ಉದಯಕೆ ಬರುತಿರಲು
ಒದಗಿತೆ ಆ ರಾಶಿ ದಿನ ಕರ್ಣಗೆ
ತುದಿ ಮಧ್ಯಾಹ್ನಕ್ಕೆ ದರಿದ್ರನೆನಿಸುವ
ಇದರಿಂದ ಕಡೆಗಂಡರಾರು ಜಗದೊಳಗೆ
ಬೆಳ್ಳಿಯ ಗಿಣಿಲು ಬಂಗಾರದ ಹರಿವಾಣ
ಕುಳಿತಲ್ಲಿ ಕನಕದ ರಾಶಿಗಳು
ಗಳಿಗೆಗೆ ಈ ಭಾಗ್ಯ ಕಾಳಬೆಳುದಿಂಗಳು
ಉಳಿದವು ನಾ ಕಾಣೆ ಚಿರಲಕ್ಷ್ಮಿಯೆನಲು
ಇಂತು ಈ ಪರಿಯಲನಂತರು ಹೋದರು
ಎಂತು ಪೇಳಲಿ ಅವರ ಪೆಸರುಗಳ
ಚಿಂತಾಯತ ಶ್ರೀ ಪುರಂದರವಿಠಲನ
ಸಂತತ ಪಾದಕಮಲವ ಭಜಿಸೊ ಮನುಜಾ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ