ನೆಚ್ಚದಿರೋ ಪ್ರಾಣಿ ಸಂಸಾರ ಸ್ಥಿರವೆಂದು
ಹುಚ್ಚು ಬುದ್ಧಿಯಲಿ ನೀ ಕೆಡಬೇಡ
ಎಚ್ಚರಿತುಕೊಂಡು ಧರ್ಮದಿ ನಡೆ ಕಣ್ಣನು
ಮುಚ್ಚಿದ ಮೇಲುಂಟೆ - ನರಜನ್ಮ ಸ್ಥಿರವಲ್ಲ
ಅಷ್ಟಕಂಬವನಿಕ್ಕಿ ತಾಕದುಪ್ಪರಿಗೆಯ
ಕಟ್ಟಿದ ಮನೆ ಇದ್ದಂತಿಹುದು
ಹೊಟ್ಟೆತುಂಬ ಉಣದೆ ಧನವ ಗಳಿಸಿ - ಬ
ಚ್ಚಿಟ್ಟಲ್ಲಿರದೆ ಸಂಗಡ ಬಾಹೋದಲ್ಲ
ಅತಿ ಪ್ರೀತಿಯಿಂದ ಮದುವೆಯಾದ ಮೋಹದ
ಸತಿ ತನ್ನ ಮರಣದ ಕಾಲಕ್ಕೆ
ಗತಿಯಾವುದೆನುತಲೆ ಮರುಗಿದಪ್ಪಳಲ್ಲದೆ
ಜತೆಯಾಗಿ ನಿನ್ನ ಸಂಗಡ ಬಾಹಳಲ್ಲ
ಒಂದೊಂದು ಪರಿಯ ಬುದ್ಧಿಯ ಪೇಳಿ ಸಲಹಿದ
ಕಂದ ನಿನ್ನವಸಾನ ಕಾಲಕೆ
ಮುಂದೇನು ಸಂಸಾರ ನಡೆಸಲುಪಾಯವೇ
ನೆಂದು ಚಿಂತಿಸುವ ಸಂಗಡ ಬಾಹನಲ್ಲ
ನಂಟರಿಷ್ಟರು ಬಂಧು - ಬಳಗವು ಹರಿ ಕೊಟ್ಟು
ದುಂಟಾದರೆ ಬಂದು ಉಣ್ಣುವರು
ಕಂಟಕ ಬಂದರೆ ಹೊತ್ತು ಕಾಷ್ಠದೊಳಿಟ್ಟು
ಕಂಟಿಯ ತಂದೊಟ್ಟಿ ಸುಡುವರು ಕಾಣೋ
ಇಂತಿದು ಒಂದು ಪ್ರಯೋಜನ ನಿನಗಿಲ್ಲ
ಅಂತ್ಯಕಾಲಕ್ಕೆ ಸಂಗಡ ಬಾಹುದು
ಕಂತುಜನಕ ನಮ್ಮ ಪುರಂದರವಿಠಲನ
ಸಂತತ ಧ್ಯಾನದೊಳಿರು ಕಾಣೋ ಮನುಜಾ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ