ಕೀರ್ತನೆ - 548     
 
ನಾರಾಯಣನೆಂಬ ನಾಮದ ಬೀಜವ ನಿಮ್ಮ ನಾಲಿಗೆ ತುದಿಯಿಂದಲಿ ಬಿತ್ತಿರಯ್ಯ ಹೃದಯಹೊಲವನು ಮಾಡಿ ಮನವ ನೇಗಿಲ ಮಾಡಿ ಶ್ವಾಸೋಚ್ಛಾಸ ಎರಡೆತ್ತಮಾಡಿ | ಜ್ಞಾನವೆಂಬ ಹಗ್ಗ ಕಣ್ಣಿಯ ಮಾಡಿ | ನಿರ್ಮಮವೆಂಬ ಗುಂಟೆಲಿ ಹರಗಿರಯ್ಯ ಮದಮತ್ಸರಗಳೆಂಬ ಮರಗಳನೆ ತರಿದು ಕಾಮಕ್ರೋಧಗಳೆಂಬ ಕಳೆಯ ಕಿತ್ತು ।। ಪಂಚೇಂದ್ರಿಯವೆಂಬ ಮಂಚಿಕೆಯನೆ ಹಾಕಿ ಚಂಚಲವೆಂಬ ಹಕ್ಕಿಯ ಹೊಡಿಯಿರಯ್ಯ ಉದಯಾಸ್ತಮಾನವೆಂಬ ಎರಡು ಕೊಳಗದಲಿ | ಆಯುಷ್ಯವೆಂಬ ರಾಶಿ ಅಳೆಯುತ್ತಿರೆ || ಸ್ವಾಮಿ ಶ್ರೀ ಪುರಂದರವಿಠಲನ ನೆನೆದರೆ | ಪಾಪ ರಾಶಿಯ ಪರಿಹರಿಸುವನಯ್ಯ*