ನಾ ನಿನ್ನ ಧ್ಯಾನದೊಳಿರಲು ಇಂಥ
ಹೀನ ಮಾನವರಿಂದೇನಾಹೋದು ಹರಿಯೆ
ಮಚ್ಚರಿಸಿದರೇನ ಮಾಡಲಾಪರೊ ಎನ್ನ
ಅಚ್ಯುತ ನಿನ್ನದೊಂದು ದಯವಿರಲು ||
ವಾಚ್ಛಲ್ಯ ಬಿಡದಿರು ನಿನ್ನ ನಂಬಿದ ಮೇಲೆ
ಕಿಚ್ಚಿಗೆ ಗೊರಲೆ ಮುತ್ತುವುದೆ ಕೇಳೆಲೊ ರಂಗ
ದಾಳಿಯಲಿ ತೇಜಿ ವೈಹಾಳಿಯಲಿ ನಡೆಯಲು
ಧೂಳು ರವಿಗೆ ತಾನು ಮುಸುಕುವುದೇ ||
ತಾಳಿದವರಿಗೆ ವಿರುದ್ಧ ಲೋಕದೊಳುಂಟೆ
ಗಾಳಿಗೆ ಗಿರಿ ನಡುಗುವುದೆ ಕೇಳೆಲೊ ರಂಗ
ಕನ್ನಡಿಯೊಳಗಿನ ಗಂಟ ಕಂಡು ಕಳ್ಳ
ಕನ್ನವಿಕ್ಕಲು ವಶವಾಗುವುದೇ
ನಿನ್ನ ಧ್ಯಾನವ ಮಾಡೆ ಪುರಂದರವಿಠಲನೆ
ಚಿನ್ನಕ್ಕೆ ಪುಟವಿಕ್ಕಿದಂತೆ ಕೇಳೆಲೊ ರಂಗ