ನಂಬಬೇಡ ನಾರಿಯರನು
ಹಂಬಲಿಸಿ ಹಾರಯಿಸಬೇಡ
ಅಂಬುಜಾಕ್ಷಿಯರೊಲುಮೆ ಬಯಲು
ಡಂಬಕವೆಂದು ತಿಳಿಯಿರೊ
ನೋಟವೆಲ್ಲ ಪುಸಿಯು ಸತಿಯ
ರಾಟವೆಲ್ಲ ಸಂಚು - ಸನ್ನೆ
ಕೂಟವೆಲ್ಲ ಗನ್ನ - ಘಾತುಕ
ನೋಟವೆಲ್ಲ ವಂಚನೆ
ವಾತಬದ್ಧ ಹೆಂಗಳಲ್ಲಿ
ಕೋಟಲೆಗೊಂಡು ತಿರುಗಬೇಡ
ಮಾಟಗಾತಿಯರೊಲುಮೆ ಬಯಲು
ಬೂಟಕವೆಂದು ತಿಳಿಯಿರೊ
ಸೋತೆನೆಂದು ವಿಟಗೆ ದೈನ್ಯ
ಮಾತನಾಡಿ ಮರುಳುಗೊಳಿಸಿ
ಕಾತರವ ಹುಟ್ಟಿಸಿ ಅವನ
ಮಾತೆ ಪಿತರ ತೊಲಗಿಸಿ
ಪ್ರೀತಿಬಡಿಸಿ ಹಣವ ಸೆಳೆದು
ರೀತಿಗೆಡಿಸಿ ಕಡೆಯಲವನ
ಕೋತಿಯಂತೆ ಮಾಡಿ ಬಿಡುವ
ಜಾತಿಕಾರ್ತಿ ಹೆಂಗಳೆಯರ
ಧರೆಯ ಜನರ ಮೋಹಕೆಳಸಿ
ಭರದಿ ನೆಟ್ಟು ಕೆಡಲುಬೇಡ
ಎರಳೆಗಂಗಳ ಹೆಂಗಳೊಲುಮೆ
ಗುರುಳೆ ನೀರ ಮೇಲಿನ
ಮರೆಯಬೇಡ ಗುರುಮಂತ್ರವ
ಸ್ಥಿರವಿಲ್ಲದ ಜನ್ಮದಲ್ಲಿ
ಕರುಣನಿಧಿ ಪುರಂದರವಿಠಲನ
ಚರಣಸ್ಮರಣೆ ಮಾಡಿರೊ
Music
Courtesy:
ಸ್ಥಲ -
ಕೀರ್ತನೆಗಳು
ವಿಷಯ -
ಲೋಕನೀತಿ