ಧನವಗಳಿಸಬೇಕಿಂತಹದು -ಈ
ಜನರಿಗೆ ಕಾಣಿಸದಂತಹದು
ಕೊಟ್ಟರೆ ತೀರದಂತಹದು ತನ್ನ
ಬಿಟ್ಟು ಅಗಲಿ ಇರದಂತಹದು
ಕಟ್ಟಿದ ಗಂಟನು ಬಯಲೊಳಗಿಟ್ಟರೆ
ಮುಟ್ಟರು ಆರು ಅಂತಹದು
ಕರ್ಮವನೋಡಿಸುವಂತಹದು
ಧರ್ಮವ ಮಾಡಿಸುವಂತಹದು
ನಿರ್ಮಲವಾಗಿದೆ ಮನಸಿನೊಳಗೆ ನಿಜ
ಧರ್ಮವ ತೋರಿಸುವಂತಹದು
ಅಜ್ಞಾನವು ಬಾರದಂತಹದು ನಿಜ
ಸುಜ್ಞಾನವ ತೋರುವಂತಹದು
ವಿಜ್ಞಾನಮೂರ್ತಿ ಪುರಂದರವಿಠಲನ
ಪ್ರಜ್ಞೆಯನ್ನು ಕೊಡುವಂತಹದು