ಕೆಟ್ಟಿತು ಕೆಲಸವೆಲ್ಲ- ಲೋಕದಿ ಕಾಮ
ನಟ್ಟುಳಿಘನವಾಯಿತು
ಬಟ್ಟೆ ತಪ್ಪಿ ಮುಂದೆ ಕೆಟ್ಟು ಕರ್ಮಿಯಾಗಿ
ಬಿಟ್ಟು ಮುಂದಣ ಪಥವ ಹೇ ದೇವಾ
ಸತ್ಯ ಕಾಮ ಕರ್ಮವು ಧರ್ಮದ ಬಲ
ಮತ್ತೆ ಅಡಗಿಹೋಯಿತು
ಎತ್ತ ನೋಡಲು ನೀಚವೃತ್ತಿಯೆ ತುಂಬಿ
ಅತ್ಯಂತ ಪ್ರಬಲವಾಯ್ತೋ ಹೇ ದೇವಾ
ಹೊತ್ತು ಹೊತ್ತಿಗೆ ಹಲವು ಲಂಪಟತನದಲಿ
ಚಿತ್ತ ಚಂಚಲವಾಯಿತು
ಸತ್ತು ಹುಟ್ಟುವ ಸುಳಿಯಲ್ಲದೆ ಮತ್ತೊಂದು
ಗೊತ್ತು ಇಲ್ಲದೆ ಹೋಯಿತ್ತೋ ಹೇ ದೇವಾ
ಪೇಳುವುದೇನಿನ್ನು ದುರ್ಜನರ ಸಂಗ
ದೋಲಾಟ ಸೊಗಸಾಯಿತು
ಕೀಳು ಮೇಲು ಮೇಲು ಕೀಳಾಗಿ ನಡೆಯುವ
ಕಾಲ ವೆಗ್ಗಳವಾಯಿತೋ ಹೇ ದೇವಾ
ಆಳುವ ಅರಸರಿಗೆಲ್ಲ ಕಾಂಚನದಾಸೆ
ಮೇಲು ಮೇಲಾಯಿತಯ್ಯ
ನೀಲ ಮೇಘಶ್ಯಾಮ ನಿನ್ನಾಳೆ೦ಬರಿಗೆ
ಕೂಳು ಹುಟ್ಟದೆ ಹೋಯಿತೋ ಹೇ ದೇವಾ
ಅರಿಷಡ್ವರ್ಗದಲಿ ಸಿಲುಕಿ ಸುಜ್ಞಾನದ
ಅರಿವು ಇಲ್ಲದೆ ಹೋಯಿತು
ಕರುಣಾಳು ಶ್ರೀ ಪುರಂದರವಿಠಲನೆ ನಿನ್ನ
ಸ್ಮರಣೆಯಿಲ್ಲದೆ ಹೋಯಿತೋ ಹೇ ದೇವಾ