ಕೀರ್ತನೆ - 499     
 
ಕಷ್ಟವಾವುದು ಸುಖವದಾವುದಯ್ಯ ಹೊನ್ನುಳ್ಳವಗೆ ಬಂದ ದಾರಿದ್ರ ಬಲು ಕಷ್ಟ ಅನ್ಯರ ಮನೆಯ ಸೇರುವುದು ಬಹುಕಷ್ಟ ಅನ್ಯಾಯವಿರದೆ ಅಪಕೀರ್ತಿ ಹೊರುವುದು ಕಷ್ಟ ಗನ್ನಘಾತಕವ ಮಾಡುವುದು ಕಷ್ಟವಯ್ಯ ಉದ್ಯೋಗದಲಿ ಒಳ್ಳೆ ಲಾಭವಾದರೆ ಸುಖವು ಬದ್ಧನುಡಿ ನುಡಿಯುವುದು ಬಹಳ ಸುಖವು ಗುದ್ದಾಟವಿರದಣ್ಣ - ತಮ್ಮರಿದ್ದರೆ ಸುಖವು ಬುದ್ಧಿವಂತನಾಗಿ ಬಾಳುವುದು ಸುಖವಯ್ಯ ಮತ್ಸರವಿರದ ಸೊಸೆಯು ಮನೆಗೆ ಬಂದರೆ ಸುಖವು ಪುತ್ರ ತಾ ಬುದ್ಧಿವಂತನಾದರೆ ಸುಖವು ಹಸ್ತವನು ಎತ್ತಿ ದಾನವನು ಕೊಡುವುದು ಸುಖವು ವಸ್ತ್ರವನು ಮಾಸದುಡುವುದು ಬಹಳ ಸುಖವಯ್ಯಾ ಭೂತಳದಿ ಸಮ್ಮತನು ಆಗಿ ಬಾಳ್ವುದು ಸುಖವು ಭೂತೇಶನಾ ಪ್ರೀತಿ ಬಹಳ ಸುಖವು ನೀತಿ ನಡೆಯನು ನಡೆವುದೇ ಸುಖವು ಹಿರಿಯರ ಮಾತುಗಳ ನಡೆಸುವುದು ಬಹಳ ಸುಖವಯ್ಯ ಆಧಾರವಿಲ್ಲದಲೆ ಸಾಲ ಕೊಡುವುದು ಕಷ್ಟ ಮಾದ ಹುಣ್ಣದು ಮತ್ತೆ ಹುಟ್ಟಿದರೆ ಕಷ್ಟ ಹಾದಿಯನು ಬರಿಗಾಲಿನಿಂದ ನಡೆಯುವುದು ಕಷ್ಟ ಆದಿ ಮೂರುತಿ ಪುರಂದರವಿಠಲರಾಯ